ಲಿಂಗವ ನೆರೆನಂಬು

2-6809282dc4186
Published on
ಬಸವಣ್ಣನವರು ತಮ್ಮ ವಚನದಲ್ಲಿ, ಸುಪ್ರಭಾತ ಸಮಯದಲ್ಲಿ ಲಿಂಗವ ಪೂಜಿಸಿದರೆ ತಪ್ಪುವವು ಅಪಮೃತ್ಯು ಕಾಲಕರ್ಮಂಗಳು ಎಂದಿದ್ದರೆ, ಶರಣರಾದ ಉರಿಲಿಂಗ ಪೆದ್ದಿಗಳು, ‘ಬೇಡಿದ್ದು ಕೊಡುವ ಲಿಂಗವ ಬೇಡಲರಿಯದೆ, ಕೊಡಲಾರದ ಮಾನವರಿಗೆ ಆಸೆ ಮಾಡಿ ಬೇಡಿ ಕೆಡಬೇಡ’ ಎಂದಿರುವರು.

ಅಲ್ಪಾಯುಷಿಯಾಗಿದ್ದ ಮಾರ್ಕಂಡೇಯನಿಗೆ ಅದೇ ಲಿಂಗ ಆಯುಷ್ಯವನ್ನು ಕೊಟ್ಟಿದ್ದು ಎಲ್ಲರಿಗೂ ಗೊತ್ತಿದೆ. ಆ ಲಿಂಗರೂಪದಿಂದ ಶಿವನು ಭಾಷೆ ಕೊಟ್ಟಿದುದಕ್ಕೆ ದೃಷ್ಟಾಂತ ಹೀಗಿದೆ. ಚೋಳನಿಗೆ ಹೊನ್ನಮಳೆಯ ಕರೆಸಿದ ದೇವರ ದಾಸಿಮಯ್ಯನವರು ತಾವು ನೇಯ್ದುದನ್ನು ಸಿದ್ದಾಪುರ ಸಂತೆಗೆ ಮಾರಲು ಹೋದರು. ಅಲ್ಲಿ ಅದಕ್ಕೆ ಬೆಲೆ ಕಟ್ಟುವ ಎಂಟೆದೆ ಯಾರಿಗೂ ಇರಲಿಲ್ಲ. ನಿರುಪಾಯನಾಗಿ ಮದನೂರಿಗೆ ಹೊರಟಾಗ ದಾರಿಯಲ್ಲಿ ಮುಪು್ಪ ಜಂಗಮನೊಬ್ಬ ಬರಿ ಮೈಲಿ ಚಳಿಯಿಂದ ನಡುಗುತ್ತಿದ್ದ. ಏನಾದರೂ ಹೊದೆಯಲು ಇದ್ದರೆ ಕೊಡುತಂದೆ ಎಂದ.

ಆತನಿಗೆ ತಾವು ತಯಾರಿಸಿದ ದಿವ್ಯಾಂಬರವನ್ನೇ ಕೊಟ್ಟರು. ದಾಸಿಮಯ್ಯನವರ ಈ ಔದಾರ್ಯವನ್ನು ಕಂಡು, ‘ನನಗೇಕೆ ಇಂತಹ ಬೆಲೆಯುಳ್ಳ ವಸ್ತ್ರ ತಂದೆ. ಹಳೆಯ ಹರಕು ಬಟ್ಟೆ ಇಲ್ಲವೇ’ ಎಂದು ಕೇಳಿದ. ಅದಕ್ಕೆ ದಾಸಿಮಯ್ಯ, ‘ಒಮ್ಮೆ ನಿಮಗೆ ಅರ್ಪಿತವಾದುದು ಅದು ನಿಮ್ಮ ಸೊತ್ತು ಸ್ವಾಮಿ, ಬೇರೇನು ಭಾವಿಸದೆ ಹೊದ್ದುಕೊಳ್ಳಿ’ ಎಂದರು. ಜಂಗಮ ಅಷ್ಟಕ್ಕೂ ಬಿಡಲಿಲ್ಲ. ದಾಸಿಮಯ್ಯನವರ ಮುಂದೆಯೇ ಆ ಮಡಿಯನ್ನು ಪರ ಪರ ಹರಿದು ಚಿಂದಿಮಾಡಿ ಕೈ- ಕಾಲಿಗೆ ಸುತ್ತಿಕೊಂಡು ಒಂದು ಚಿಂದಿಯನ್ನು ಮೈ ಮತ್ತು ತಲೆಗೆ ಸುತ್ತಿಕೊಂಡ. ದಾಸಿಮಯ್ಯ ವಿಚಲಿತರಾಗಲಿಲ್ಲ.

ಸಂತೆಯಿಂದ ಬಂದು ಮನೆಯಲ್ಲಿ ಇದ್ದ ಪ್ರಸಾದ ಸ್ವೀಕರಿಸಿ ದಂಪತಿಗಳು ರಾತ್ರಿ ಮಲಗಿದರು. ಬೆಳಗ್ಗೆ ಶಿವಧ್ಯಾನ ಮಾಡುತ್ತ ಎದ್ದು ಕಣ್ಣು ಬಿಡುವಷ್ಟರಲ್ಲಿ ಹಳೆಯ ಮನೆ ಹೋಗಿ ಹೊಸ ಮನೆಯಾಗಿತ್ತು. ಚೀಲಗಳೆಲ್ಲ ತುಂಬಿದ್ದವು. ತವನಿಧಿ ಸಹ ಇತ್ತು. ಹೀಗೆ ಶಿವನು ದಾಸಿಮಯ್ಯನಿಗೆ ತವನಿಧಿ ಕೊಟ್ಟು ದೇವ ಮಾನವರಿಗೆ ಬೇಡಿದ ಫಲ ಪದಂಗಳ ನೀಡಿದ ಮಹಾದಾನಿ. ಅದಕ್ಕೆ ನರರಿಗೆ ಬೇಡದೆ ಹರನಿಗೆ ಬೇಡಬೇಕು ಎಂದಿರುವರು ಶರಣರು ಹಾಗೂ ಪುರಾತನರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net