

ಕಾರ್ಗಲ್: ಲಿಂಗನಮಕ್ಕಿ ವಿದ್ಯುದಾಗಾರದ 2ನೇ ಘಟಕದ ದುರಸ್ತಿ ಕಾರ್ಯವನ್ನು ಬುಧವಾರ ಆರಂಭಿಸಲಾಯಿತು. ಬುಧವಾರ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಕೆಪಿಸಿ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಕಾರ್ಮಿಕರು, ದುರಸ್ತಿ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಪ್ರಾರ್ಥಿಸಿದರು.
ಒಂದೂವರೆ ವರ್ಷದ ಹಿಂದೆ ವಿದ್ಯುದಾಗರದ ವಿದ್ಯುತ್ ಉತ್ಪಾದನಾ ಘಟಕದ 2ನೇ ಯೂನಿಟ್‌ನ ರನ್ನರ್ ಬ್ಲೇಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಗಿತಗೊಳಿಸಲಾಗಿತ್ತು.
1.47 ಕೋಟಿ ರೂ. ವೆಚ್ಚದಲ್ಲಿ ಗುಜರಾತಿನ ಎಇಎಸ್ ಹೈಡ್ರೋ ಸಂಸ್ಥೆಯು ವಿದ್ಯುದಾಗಾರದ ಎರಡನೇ ಯೂನಿಟ್ ದುರಸ್ತಿ ಕಾರ್ಯ ಹಾಗೂ ಬ್ಲೇಡ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಪೂರ್ಣ ಪ್ರಮಾಣದ ದುರಸ್ತಿ ಕಾರ್ಯಕ್ಕೆ 8 ತಿಂಗಳು ಕಾಲಾವಕಾಶ ಬೇಕು ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದರು.
ಲಿಂಗನಮಕ್ಕಿ ವಿದ್ಯುದಾಗಾರದಲ್ಲಿ ತಲಾ 27.5 ಮೆಗಾವ್ಯಾಟ್ ಸಾಮರ್ಥ್ಯದ ಎರಡು ವಿದ್ಯುತ್ ಉತ್ಪಾದನಾ ಘಟಕಗಳಿವೆ. ಪ್ರಸ್ತುತ ಒಂದು ಘಟಕ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ದೋಷ ಕಂಡುಬಂದ ಇನ್ನೊಂದು ಘಟಕವನ್ನು 2024ರ ಫೆಬ್ರವರಿಯಲ್ಲೇ ಸ್ಥಗಿತಗೊಳಿಸಲಾಗಿತ್ತು. ಯೂನಿಟ್‌ನ ರನ್ನರ್‌ನಲ್ಲಿ ಒಟ್ಟು ಆರು ಬ್ಲೇಡ್‌ಗಳಿದ್ದು ಆ ಪೈಕಿ ಒಂದು ಬ್ಲೇಡ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ವಿದ್ಯುತ್ ಉತ್ಪಾದನಾ ಕೇಂದ್ರ ಆರಂಭವಾದ 1980ರಿಂದ ಇಲ್ಲಿಯವರೆಗೆ ಯಾವುದೇ ರಿಪೇರಿ ಆಗಿಲ್ಲ, ಇದೇ ಮೊದಲು.
ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತ ಎಚ್.ಆರ್.ರಮೇಶ್, ಅಧೀಕ್ಷಕ ಅಭಿಯಂತರಾದ ವಾಸುದೇವಮೂರ್ತಿ, ರಂಗನಾಥ್, ದಿನೇಶ್, ಇಂಜಿನಿಯರುಗಳಾದ ಅಲ್ಲಮಪ್ರಭು, ದಿವ್ಯಾ, ಗಿರೀಶ್, ಪ್ರಸನ್ನಕುಮಾರ್ ಇತರರಿದ್ದರು.