

ಬೆಂಗಳೂರು: ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ರಾಜ್ಯ ಸರ್ಕಾರ ಕಸರತ್ತು ನಡೆಸಿದೆ. ಆದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್ ಮಂಡಳಿಯಲ್ಲಿ ಇಲಾಖಾ ವಾಹನಕ್ಕೆ ಇಂಧನ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಈ ಕುರಿತು ಪತ್ರ ಬರೆದಿರುವ ಅವರು, ಪೆಟ್ರೋಲ್ ಇಂಡೆಂಟ್‌ಗಳನ್ನು ಮನಬಂದಂತೆ ಬಳಸಲಾಗುತ್ತಿದೆ. ಸರ್ವಿಸ್ ಸ್ಟೇಷನ್‌ಗಳು ಹಾಗೂ ಸರ್ಕಾರಿ ವಾಹನಗಳ ಚಾಲಕರು ಈ ಗೋಲ್‌ಮಾಲ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ, ಹಜ್, ವಕ್ಫ್ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ ಅವರ ಸರ್ಕಾರಿ ವಾಹನಕ್ಕೆ ಇಂಡೆಂಟ್ ಇಲ್ಲದಿದ್ದರೂ ಐದು ತಿಂಗಳಲ್ಲಿ 390 ಲೀಟರ್ ಪೆಟ್ರೋಲ್ ತುಂಬಿ, ಸರ್ಕಾರದ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ಬಿಲ್‌ಗಳ ದಾಖಲೆಗಳನ್ನು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರಕ್ಕೆ ಲಗತ್ತಿಸಿ ಸರ್ಕಾರಿ ವಾಹನಗಳಿಗೆ ಇಂಧನ ಮಿತಿ ಮಾರ್ಗಸೂಚಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಕ್ಫ್ ಮಂಡಳಿ ಉನ್ನತ ಅಧಿಕಾರಿಗಳ ವಾಹನಕ್ಕೆ ಇಂತಿಷ್ಟೇ ಇಂಧನ ಬಳಸಬೇಕು ಎಂದು ಮಿತಿಯೇ ಇಲ್ಲದಿರುವುದು ಗೋಲ್‌ಮಾಲ್‌ಗೆ ದಾರಿ ಮಾಡಿಕೊಟ್ಟಿದೆ. ಅಲ್ಪಸಂಖ್ಯಾತರ ಕಲ್ಯಾಣ ಚಟುವಟಿಕೆಗೆ ವಿನಿಯೋಗ ಅನುದಾನ, ಹೀಗೆ ಅಪಮಾರ್ಗದಲ್ಲಿ ಬಳಕೆಯಾಗುತ್ತಿದೆ ಎಂದು ಶಾಸಕ ಯತ್ನಾಳ್ ಕಳವಳ ವ್ಯಕ್ತಪಡಿಸಿದ್ದಾರೆ.