Narendra Modi | ಡೊನಾಲ್ಡ್ ಟ್ರಂಪ್ ರಾಜಿ ಸಂಧಾನ; ಅಮೆರಿಕಾ ಅಧ್ಯಕ್ಷರ​ ಕರೆಗೆ ಎದುರು ನೋಡುತಿದ್ದೇನೆ ಎಂದ ಪ್ರಧಾನಿ ಮೋದಿ!

PM Modi meets Donald Trump
Published on

Narendra Modi: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜಿ ಸಂದೇಶಕ್ಕೆ ಬುಧವಾರ (ಸೆಪ್ಟೆಂಬರ್​​ 10) ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಅಮೆರಿಕ ಸ್ವಾಭಾವಿಕ ಪಾಲುದಾರರು ಎಂದಿದ್ದಾರೆ.

ತಮ್ಮ ಎಕ್ಸ್​​​ ಖಾತೆಯಲ್ಲಿ ಪೋಸ್ಟ್​​​ ಹಂಚಿಕೊಂಡಿರುವ ಪ್ರಧಾನಿ ಮೋದಿ, ಭಾರತ ಮತ್ತು ಅಮೆರಿಕ ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಮ್ಮ ವ್ಯಾಪಾರ ಮಾತುಕತೆಗಳು ಉಭಯ ದೇಶಗಳ ಪಾಲುದಾರಿಕೆಯ ಅಪರಿಮಿತ ಸಾಮರ್ಥ್ಯಕ್ಕೆ ದಾರಿ ಮಾಡಿಕೊಡುವ ವಿಶ್ವಾಸವಿದೆ, ನಮ್ಮ ತಂಡಗಳು ಈ ಚರ್ಚೆಗಳನ್ನು ಆದಷ್ಟು ಬೇಗ ಮುಗಿಸಲು ಕೆಲಸ ಮಾಡುತ್ತಿವೆ ಎಂದರು.‘

ಭಾರತದೊಂದಿಗಿನ ವ್ಯಾಪಾರ ಮಾತುಕತೆಗಳು ಮುಂದುವರೆದಿದ್ದು, ಅಂತಿಮವಾಗಿ ಪ್ರಗತಿಯ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಟ್ರಂಪ್, ಟ್ರುತ್ ಸೋಶಿಯಲ್ ಪೋಸ್ಟ್‌ನ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡ ಕೆಲವೇ ಗಂಟೆಗಳ ಬಳಿಕ ಪ್ರಧಾನಿ ಮೋದಿ ಕಡೆಯಿಂದ ಈ ಹೇಳಿಕೆಗಳು ಹೊರ ಬಿದ್ದಿವೆ.

ಟ್ರಂಪ್​​ ಮಾತು..

ಟ್ರಂಪ್​​ ತಮ್ಮ ಎಕ್ಸ್​​​ ಖಾತೆಯಲ್ಲಿ, ನಮ್ಮ ಎರಡೂ ದೇಶಗಳಿಗೆ ಯಶಸ್ವಿ ತೀರ್ಮಾನಕ್ಕೆ ಬರಲು ಯಾವುದೇ ತೊಂದರೆ ಇರುವುದಿಲ್ಲ ಎಂದು ನನಗೆ ಖಚಿತವಾಗಿದೆ ಎಂದು ಬರೆದಿದ್ದಾರೆ, ಮುಂಬರುವ ವಾರಗಳಲ್ಲಿ ಪ್ರಧಾನಿ ಮೋದಿಯವರೊಂದಿಗೆ ಮಾತನಾಡುವ ನಿರೀಕ್ಷೆಯಿದೆ ಎಂದು ಹೇಳಿದರು. ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿರುವ ಮೋದಿ, ಶೀಘ್ರದಲ್ಲೇ ಟ್ರಂಪ್ ಅವರೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆ, ನಮ್ಮ ಎರಡೂ ಜನರಿಗೆ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಸೆಪ್ಟೆಂಬರ್ ಮೊದಲ ವಾರ​ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಆತ್ಮೀಯವಾಗಿ ನಡೆದುಕೊಂಡ ಪೋಟೋಗಳು ಮಾಧ್ಯಮಗಳು ಸೇರಿದಂತೆ, ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡಿದ್ದವು. ಇದರಿಂದ ವ್ಯಗ್ರರಾಗಿದ್ದ ಟ್ರಂಪ್​​, ಭಾರತ ಚೀನಾಗೆ ಸೋತಿದೆ ಎಂದಿದ್ದರು.

ಇದಾದ ಸ್ವಲ್ಪ ದಿನಗಳಲ್ಲಿ ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿರುವ ಟ್ರಂಪ್​​, ಭಾರತದೊಂದಿಗಿನ ಸಂಬಂಧಗಳನ್ನು "ವಿಶೇಷ" ಎಂದು ಕರೆದಿದ್ದರು. ಇದಷ್ಟೆ ಅಲ್ಲದೇ ಪ್ರಧಾನಿ ಮೋದಿಯವರೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯವನ್ನು ಈ ವೇಳೆ ಉಲ್ಲೇಖಿಸಿದ್ದರು.

ಈ ಹಿಂದೆ ಪ್ರಧಾನಿ ಮೋದಿ ಕನಿಷ್ಠ ನಾಲ್ಕು ಬಾರಿ, ಟ್ರಂಪ್ ಅವರ ಕರೆಗಳಿಗೆ ಸ್ಪಂದಿಸಿಲ್ಲ ಎಂಬ ಮಾತುಗಳು ವ್ಯಕ್ತವಾಗಿದ್ದವು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net