

ಅಹಮದಾಬಾದ್: ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಮುಂಬರುವ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸಲಾಗುವುದು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ನಮಗೆ ಬೆದರಿಕೆ ಹಾಕುವ ಮೂಲಕ ಮತ್ತು ನಮ್ಮ ಕಚೇರಿಗೆ ಹಾನಿ ಮಾಡುವ ಮೂಲಕ ಸವಾಲು ಹಾಕಿದ್ದಾರೆ. ನಮ್ಮ ಕಚೇರಿಗೆ ಹಾನಿ ಮಾಡಿದಂತೆ ನಾವು ಅವರ ಸರ್ಕಾರವನ್ನು ಒಡೆಯಲು ಹೊರಟಿದ್ದೇವೆ ಎಂದು ನಾನು ನಿಮಗೆ ಹೇಳುತ್ತೇನೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ ಮತ್ತು ನರೇಂದ್ರ ಮೋದಿಯನ್ನು ಸೋಲಿಸುತ್ತದೆ ಎಂದು ಲಿಖಿತವಾಗಿ ಬರೆದಿಟ್ಟುಕೊಳ್ಳಿ. ನಾವು ಅಯೋಧ್ಯೆಯಲ್ಲಿ ಮಾಡಿದಂತೆ ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಗುಜರಾತ್ ಅನ್ನು ಗೆಲ್ಲುತ್ತದೆ ಮತ್ತು ರಾಜ್ಯದಿಂದ ಹೊಸ ಆರಂಭವನ್ನು ಮಾಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ಅಹಮದಾಬಾದ್‌ನ ಪಾಲ್ಡಿ ಪ್ರದೇಶದಲ್ಲಿ ಜುಲೈ 2 ರಂದು ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಚೇರಿಯಾದ ರಾಜೀವ್ ಗಾಂಧಿ ಭವನದ ಹೊರಗೆ ಬಿಜೆಪಿಯ ಯುವ ಘಟಕದ ಸದಸ್ಯರು ಹಿಂದೂಗಳ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿ ಅಲ್ಲಿಗೆ ಬಂದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸದಸ್ಯರ ನಡುವೆ ನಡೆದ ಘರ್ಷಣೆಯನ್ನು ಅವರು ಉಲ್ಲೇಖಿಸಿದರು.
ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯ ಫೈಜಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದರು. ಈ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಒಬ್ಬನೇ ಒಬ್ಬ ಸ್ಥಳೀಯ ವ್ಯಕ್ತಿಯನ್ನು ಆಹ್ವಾನಿಸದಿರುವುದನ್ನು ಕಂಡು ಅಯೋಧ್ಯೆಯ ಜನರು ಕೋಪಗೊಂಡಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರು ಅಯೋಧ್ಯೆಯಿಂದ ಸ್ಪರ್ಧಿಸಲು ಬಯಸಿದ್ದರು, ಆದರೆ ಕ್ಷೇತ್ರದ ಸರ್ವೇ ನಡೆಸಿದವರು, ಸ್ಪರ್ಧೆ ಮಾಡದಂತೆ ತಿಳಿಸಿದ್ದಾರೆ. ನೀವು ಸ್ಪರ್ಧಿಸಿದರೆ ಸೋಲುತ್ತೀರಿ. ನಿಮ್ಮ ರಾಜಕೀಯ ಜೀವನ ಕೊನೆಗೊಳ್ಳುತ್ತದೆ ಎಂದು ಸಲಹೆ ನೀಡಿದ್ದರು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.