

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರಾಧ ಕೃತ್ಯಗಳು ಮತ್ತು ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕುವ ಕಾರ್ಯಾಚರಣೆಯಲ್ಲಿ ಇಡೀ ನಗರ ಪೊಲೀಸ್ ಇಲಾಖೆ ಭಾಗವಹಿಸಿದ್ದು, ಭಾನುವಾರ 5,225 ವಾಣಿಜ್ಯ ಸಂಕೀರ್ಣಗಳು ಮತ್ತು ಇತರೆ ಸ್ಥಳಗಳನ್ನು ಪರಿಶೀಲನೆ ನಡೆಸಿ 3,667 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿದೆ.
ಶನಿವಾರ ರಾತ್ರಿ 9 ಗಂಟೆಗೆ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಪರಿಶೀಲನೆ ಶುರು ಮಾಡಿದ್ದು, 535 ವೈನ್‌ಶಾಪ್, 838 ಬಾರ್ ಆ್ಯಂಡ್ ರೆಸ್ಟೋರೆಂಟ್, 1,823 ಟೀ ಅಂಗಡಿ, ಬೇಕರಿ, 707 ಲಾಡ್ಜ್‌ಗಳು, 931 ಪೇಯಿಂಗ್ ಗೆಸ್ಟ್‌ಗಳು, 526 ಪ್ರತ್ಯೇಕವಾದ ಸ್ಥಳಗಳು ಮತ್ತು ರೌಡಿಗಳ ಅಡ್ಡೆಗಳು ಸೇರಿ 5,225 ಸ್ಥಳಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆಯಡಿ 907 ಪ್ರಕರಣ, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆಯಡಿ 2,744, ಬಾಲಾಪರಾಧಿ ಕಾಯ್ದೆಯಡಿ 3, ಎನ್‌ಡಿಪಿಎಸ್ 1 ಮತ್ತು ಭಾರತೀಯ ದಂಡ ಸಂಹಿತೆಯಡಿ 2 ಮತ್ತು ಮುಂಜಾಗ್ರತಾ ಕಾನೂನು ಕ್ರಮದಡಿ 11 ಸೇರಿ 3,667 ಪ್ರಕರಣಗಳನ್ನು ದಾಖಲಿಸಿದೆ.
ಅಲ್ಲದೆ, 734 ರೌಡಿಶೀಟರ್, 434 ಎಂಒಬಿ ವ್ಯಕ್ತಿಗಳು, ಎಂಸಿಸಿಟಿಎನ್‌ಎಸ್ ಬೆರಳ ಮುದ್ರೆ ಸ್ಕಾೃನರ್‌ನಿಂದ 4,138 ವ್ಯಕ್ತಿಗಳನ್ನು ಹಾಗೂ 90 ದುರ್ನಡತೆ ವ್ಯಕ್ತಿಗಳನ್ನು ಪರಿಶೀಲಿಸಲಾಗಿದೆ. 13,468 ವಾಹನಗಳನ್ನು ತಪಾಸಣೆ ನಡೆಸಲಾಗಿದೆ. ಈ ಪೈಕಿ ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುತ್ತಿದ್ದ 196 ಚಾಲಕ, ಸವಾರರು ಪತ್ತೆಯಾಗಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.