

ಶಿವಮೊಗ್ಗ: ಸೇವಾ ನ್ಯೂನತೆ ತೋರಿದ ಲಿಫ್ಟ್ ಕಂಪನಿಯೊಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ತೀರ್ಪು ನೀಡಿದೆ. ಗ್ರಾಹಕರಿಂದ ಪಡೆದ 13.44 ಲಕ್ಷ ರೂ. ಮರಳಿಸಬೇಕು. ಗ್ರಾಹಕರಿಗೆ ಕಾನೂನು ಹೋರಾಟಕ್ಕೆ ತಗುಲಿದ ವೆಚ್ಚ ಹಾಗೂ ಪರಿಹಾರವಾಗಿ 50 ಸಾವಿರ ರೂ. ನೀಡುವಂತೆ ಸೂಚಿಸಿದೆ.
ಗೋಪಾಲ ಗೌಡ ಬಡಾವಣೆಯ ಎಂ.ಎನ್.ಶ್ರೀನಿವಾಸಮೂರ್ತಿ ಎರಡಂತಸ್ತಿನ ಮನೆ ಕಟ್ಟಿಸಿದ್ದು ಅದಕ್ಕೆ ಲಿಫ್ಟ್ ಅಳವಡಿಸುವಂತೆ ಚೆನ್ನೈ ಹಾಗೂ ಬೆಂಗಳೂರಿನಲ್ಲಿರುವ ನಿಭವ್ ಎಂಬ ಕಂಪನಿಗೆ 13,44,99 ರೂ. ನೀಡಿದ್ದರು. ಆದರೆ ಈ ಲಿಫ್ಟ್ ಗೃಹಪ್ರವೇಶದ ದಿನವೇ ಕೈಕೊಟ್ಟಿತ್ತು. ಇದರಿಂದ ಸಿಟ್ಟಿಗೆದ್ದ ಶ್ರೀನಿವಾಸಮೂರ್ತಿ, ಗೃಹಪ್ರವೇಶದ ಸಂದರ್ಭ ಲಿಫ್ಟ್ ಸರಿಯಿರದ ಕಾರಣ ಮನೆಗೆ ಬಂದ ಅನೇಕರಿಗೆ ತೊಂದರೆಯಾಗಿದೆ. ಅತಿಥಿಗಳು, ಸಂಬಂಧಿಕರ ಎದುರು ನನಗೆ ಅವಮಾನವಾಗಿದೆ. ಹೀಗಾಗಿ ನಾನು ಲಿಫ್ಟ್‌ಗೆ ಪಾವತಿ ಮಾಡಿದ್ದ ಹಣ ಮರಳಿಸಬೇಕು. ವೆಚ್ಚ ಹಾಗೂ ಪರಿಹಾರವಾಗಿ 60 ಸಾವಿರ ರೂ. ನೀಡುವಂತೆ ನಿಭವ್ ಕಂಪನಿಗೆ ಸೂಚನೆ ನೀಡಬೇಕೆಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ವಾದ-ಪ್ರತಿವಾದ ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ. ಪಟ್ಟಣ ಶೆಟ್ಟಿ ಹಾಗೂ ಬಿ.ಡಿ.ಯೋಗಾನಂದ ಅವರನ್ನೊಳಗೊಂಡ ಪೀಠವು 13,44,999 ರೂ.ಗೆ ಫೆ.6ರಿಂದ ಇದುವರೆಗೆ ಶೇ.9ರ ಬಡ್ಡಿಯನ್ನು 45 ದಿನಗಳಲ್ಲಿ ಗ್ರಾಹಕರಿಗೆ ನೀಡಬೇಕು. ತಪ್ಪಿದಲ್ಲಿ ಪೂರ್ತಿ ಹಣ ನೀಡುವವರೆಗೆ ಸದರಿ ಮೊತ್ತದ ಮೇಲೆ ಶೇ.10ರ ಬಡ್ಡಿಯಂತೆ ಹಣ ನೀಡಬೇಕೆಂದು ಆದೇಶ ನೀಡಿದೆ.