ಸಾಹಿತಿಗಳಿಗೆ ಜೀವ ಬೆದರಿಕೆ: ಸೂಕ್ತ ಕ್ರಮಕ್ಕೆ ಸಿಎಂ ಭರವಸೆ

CM Siddaramaiah
Published on

ಬೆಂಗಳೂರು:

ಕೆಲ ಲೇಖಕರು ಸಾಹಿತಿಗಳು ಹಾಗೂ ಹೋರಾಟಗಾರರಿಗೆ ಬೆದರಿಕೆ ಪತ್ರಗಳು ಬರುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಹಿರಿಯ ಸಾಹಿತಿಗಳು, ಲೇಖಕರು ಮತ್ತು ಹೋರಾಟಗಾರರ ನಿಯೋಗ ಭೇಟಿ ಮಾಡಿದ ಸಂದರ್ಭದಲ್ಲಿ ಸಿಎಂ ಅಭಯ ನೀಡಿದ್ದಾರೆ.

ಹಿರಿಯ ಸಾಹಿತಿ ಡಾ.ಕೆ ಮರುಳಸಿದ್ದಪ್ಪ ಮಾತನಾಡಿ ಹಲವಾರು ಸಾಹಿತಿಗಳಿಗೆ ಕಳೆದೊಂದು ವರ್ಷದಿಂದ ನಿರಂತರವಾಗಿ ಜೀವ ಬೆದರಿಕೆ ಪತ್ರಗಳು ಬರುತ್ತಿದ್ದು, ಸಾಹಿತಿಗಳು, ಆತಂಕ, ಮುಜುಗರದಿಂದ ಬದುಕುವ ಪರಿಸ್ಥಿತಿ ಉಂಟಾಗಿದೆ ಎಂದು ಹಲವು ಪ್ರಕರಣಗಳನ್ನು ಉದಾಹರಿಸಿದರು.

ಕುಂ.ವೀರಭದ್ರಪ್ಪ, ಡಾ:ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್, ಅವರುಗಳಿಗೆ ಅತಿ ಹೆಚ್ಚು ಬೆದರಿಕೆಗಳು ಬಂದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದ, ವಾತಾವರಣ ಸೃಷ್ಟಿಯಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರಿಗೆ ಬಂದೊದಗಿದ ಗತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಬೆದರಿಕೆ ಪತ್ರಗಳ ಬಗ್ಗೆ ಒಂದು ತಂಡ ರಚಿಸಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿರುವ, ವೃತ್ತಿ ಪರವಾಗಿರುವ ಖಡಕ್ ಅಧಿಕಾರಿಗಳ ಪೊಲೀಸ್ ತಂಡವನ್ನು ರಚಿಸಬೇಕು ಎಂದರು.

ಸಾರ್ವಜನಿಕ ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನವನಕ್ಕೆ ಮಾತ್ರ ಸೀಮಿತಗೊಳಿಸಿದ್ದು, ಇತರೆಡೆ ಪ್ರತಿಭಟನೆ ಮಾಡಲು ಇರುವ ನಿಷೇಧವನ್ನು ತೆಗೆಯಬೇಕೆಂದು ಮನವಿ ಮಾಡಿದರು.

ಈವರೆಗೆ ಸುಮಾರು 15 ಪತ್ರಗಳು ಬಂದಿವೆ. ಈ ಸರ್ಕಾರ ಬಂದ ನಂತರ ಮೂರು ಪತ್ರಗಳು ಬಂದಿವೆ. ಒಂದೇ ರೀತಿಯ ಒಕ್ಕಣೆ ಇರುವ ಪತ್ರಗಳು ಬಂದಿವೆ ಎಂದು ಸಾಹಿತಿ ಡಾ: ವಸುಂಧರಾ ಭೂಪತಿ ತಿಳಿಸಿದರು.

ರಾಜ್ಯ ಶಿಕ್ಷಣ ನೀತಿ:

ರಾಜ್ಯಕ್ಕೆ ಸೂಕ್ತವಾದ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಕಾರ್ಯೋನ್ಮುಖವಾಗಿದೆ. ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಖಾಸಗಿ ವಲಯದಲ್ಲಿ ಹೆಚ್ವಿನ ಉದ್ಯೋಗಾವಕಾಶ ಇರುವುದರಿಂದ ಹೆಚ್ಚಿನವರು ಆಂಗ್ಲ ಮಾಧ್ಯಮಕ್ಕೆ ಮೊರೆ ಹೋಗುತ್ತಾರೆ. ಇದಕ್ಕೆ ಒಂದು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕೆಂದು ಮರುಳಸಿದ್ದಪ್ಪ ತಿಳಿಸಿದರು.

ಸೌಜನ್ಯ ಪ್ರಕರಣ:

ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಬೇಕೆಂದು ಸಾಹಿತಿಗಳು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿಗಳು ಮರು ತನಿಖೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಬಹುದು. ಅಡ್ವೊಕೇಟ್ ಜನರಲ್ ಅವರೊಂದಿಗೆ ಮಾತನಾಡಿದ್ದು, ಅವರ ಪೋಷಕರು ಮೇಲ್ಮನವಿ ಸಲ್ಲಿಸಬೇಕು ಎಂದರು.

ಹಿರಿಯ ಸಾಹಿತಿಗಳಾದ ಡಾ: ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್, ಡಾ.ವಸುಂಧರಾ ಭೂಪತಿ, ಡಾ.ವಿಜಯಮ್ಮ, ದಿನೇಶ್ ಅಮೀನ್ ಮಟ್ಟು, ರುದ್ರಪ್ಪ ಹನಗವಾಡಿ, ಎಲ್.ಎನ್.ಮುಕುಂದರಾಜ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net