ನಂಜಪ್ಪ ಲೈಫ್ ಕೇರ್‌ನಲ್ಲಿ ಜೀವ ಉಳಿಸಿದ ಸಣ್ಣ ರಂಧ್ರದ ಚಿಕಿತ್ಸೆ

Nanjappa Life Care
Published on

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮೊದಲ ಬಾರಿಗೆ ನಂಜಪ್ಪ ಲೈಫ್ ಕೇರ್ ಅತ್ಯಂತ ಕ್ಲಿಷ್ಟಕರವಾದ ಸಣ್ಣ ರಂಧ್ರದ ಚಿಕಿತ್ಸೆ ಮೂಲಕ ಯುವತಿಯ ಜೀವ ಉಳಿಸಿದೆ. ಫ್ಲೋ ಡೈವರ್ಟರ್ ಚಿಕಿತ್ಸೆಯು ಆಕೆಗೆ ಸಂಭಾವ್ಯ ಮಿದುಳಿನ ರಕ್ತಸ್ರಾವ ತಪ್ಪಿಸಿ ಮರುಜನ್ಮ ನೀಡಿದೆ ಎಂದು ಆಸ್ಪತ್ರೆಯ ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಡಾ. ನಿಶ್ಚಿತಾ ಹೇಳಿದರು.

ತಲೆನೋವಿನಿಂದ ಬಳಲುತ್ತಿದ್ದ 21 ವರ್ಷದ ಯುವತಿಯನ್ನು ಎಂಆರ್‌ಐ ಸ್ಕಾೃನ್‌ಗೆ ಒಳಪಡಿಸಿದಾಗ ಆಕೆಯ ಮಿದುಳಿನ ಎಡಭಾಗದ ಪ್ರಮುಖ ರಕ್ತನಾಳದಲ್ಲಿ ಅನ್ಯೂರಿಸಮ್(ಬಲೂನ್ ರೀತಿ ಊತ) ಕಂಡುಬಂದಿತ್ತು. ಮಿದುಳಿನಲ್ಲಿ 9 ಮಿ.ಮೀ. ದೊಡ್ಡ ಗಾತ್ರ ಮತ್ತು ಅಪಾಯಕಾರಿಯಾಗಿದ್ದ ಡಿಸ್ಸೆಕ್ಟಿಂಗ್ ಅನ್ಯೂರಿಸಮ್ ಎಂದು ಕರೆಯಲ್ಪಡುವ ಊತ ಮುಂದೆ ಸಂಭವಿಸಬಹುದಾಗಿದ್ದ ಗಂಭೀರ ಸಮಸ್ಯೆಗೆ ಚಿಕಿತ್ಸೆಯು ಬ್ರೇಕ್ ಹಾಕಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಊತ ಹೊಡೆದು ಮಿದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಸಾವು ಅಥವಾ ಜೀವಿತಾವಧಿ ಅಂಗವೈಕಲ್ಯ ಸಂಭವವಿತ್ತು. ರಕ್ತನಾಳದಲ್ಲಿರುವ ಊತದ ಆಕಾರ ಮತ್ತು ಸ್ಥಳದಿಂದ ತೆರೆದ ಮಿದುಳಿನ ಶಸ್ತ್ರಚಿಕಿತ್ಸೆಯನ್ನು ಕೈಬಿಟ್ಟು ಫ್ಲೋ ಡೈವರ್ಟರ್ ಬಳಸಿ ಸುಧಾರಿತ ವಿಧಾನದ ಮೂಲಕ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದರು.

ಫ್ಲೋ ಡೈವರ್ಟರ್ ಎನ್ನುವುದು ಸಣ್ಣ, ಮೃದುವಾದ ಜಾಲರಿ(ಮೆಶ್)ಯ ಕೊಳವೆ (ಅತ್ಯಂತ ಸೂಕ್ಷ್ಮಜಾಲ). ಅದನ್ನು ಮುಖ್ಯ ರಕ್ತನಾಳದೊಳಗಿನ ಊತದ ಜಾಗದ ಪಕ್ಕದಲ್ಲಿರಿಸಿ ರಕ್ತ ತಡೆದು, ಬೇರೆ ರಕ್ತನಾಳಕ್ಕೆ ಸಂಚರಿಸಲು ಅನುವು ಮಾಡಿಕೊಟ್ಟಿದೆ. ಚಿಕಿತ್ಸೆ ನಂತರ ರಕ್ತಸಂಚಾರ ಕಡಿಮೆಯಾಗುವುದರಿಂದ ಕಾಲಾಂತರದಲ್ಲಿ ಊತವು ನಿಧಾನವಾಗಿ ಕುಗ್ಗುತ್ತದೆ. ಮಿದುಳಿನಲ್ಲಿ ರಕ್ತ ಸ್ರಾವವಾಗುವುದನ್ನು ತಡೆಗಟ್ಟಿದೆ ಎಂದರು.

ಅರಿವಳಿಕೆ ತಜ್ಞ ಡಾ. ಪ್ರವೀಣ್‌ಕುಮಾರ್ ಮತ್ತು ತಂಡವು ಅನಸ್ತೇಶಿಯಾ ನೀಡಿ ಮಿದುಳಿನ ಪ್ರಮುಖ ರಕ್ತನಾಳ ತಲುಪಲು ತೊಡೆಯಲ್ಲಿ ಸಣ್ಣ ಸೂಜಿಗಾತ್ರದ ರಂಧ್ರದ ಮೂಲಕ ತೆಳುವಾದ ಟ್ಯೂಬ್ ಬಳಸಲಾಗಿತ್ತು. ಊತವಿರುವ ಮಿದುಳಿನ ರಕ್ತನಾಳದೊಳಗೆ ತಲುಪಿ ಫ್ಲೋ ಡೈವರ್ಟರ್ ಸೂಕ್ಷ್ಮಜಾಲರಿ ಇರಿಸಲಾಗಿತ್ತು. ಇದು ಊತವಿರುವ ರಕ್ತನಾಳಕ್ಕೆ ರಕ್ತ ಸಂಚರಿಸುವುದನ್ನು ನಿಲ್ಲಿಸಿ ಊತವಿರುವ ರಕ್ತನಾಳವು ನೈಸರ್ಗಿಕವಾಗಿ ಗುಣವಾಗಲು ಸಹಾಯ ಮಾಡಿತು. ಯಶಸ್ವಿ ಚಿಕಿತ್ಸೆ ನಂತರ ರೋಗಿಯು ಚೇತರಿಸಿಕೊಂಡು ತೊಂದರೆ ಇಲ್ಲದೆ ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದರು. ಅರಿವಳಿಕೆ ತಜ್ಞ ಡಾ. ಪ್ರವೀಣ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ಶಸ್ತ್ರಚಿಕಿತ್ಸೆ ನೀಡಲಾಗದಂತಹ ದೊಡ್ಡ ಗಾತ್ರದ, ವಿಚಿತ್ರ ಆಕಾರದ ರಕ್ತನಾಳದ ಊತಗಳಿಗೆ ವಿಶೇಷವಾಗಿ ಚಿಕಿತ್ಸೆ ನೀಡಲು ಫ್ಲೋ ಡೈವರ್ಟರ್ ಉತ್ತಮ ಕಾರ್ಯವಿಧಾನ. ಒಮ್ಮೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ನಂತರ ಊತ ಹಿಂದಿರುಗುವುದಿಲ್ಲ. ಆರಂಭಿಕ ಸಮಸ್ಯೆ ಪತ್ತೆ, ತಜ್ಞರ ಸೂಕ್ತ ನಿರ್ಧಾರ ಮತ್ತು ಆಧುನಿಕ ಎಂಡೋವ್ಯಾಸ್ಕುಲರ್ ಕಾರ್ಯವಿಧಾನದ ತಕ್ಷಣ ಚಿಕಿತ್ಸೆಯಿಂದ ಮಾರಕ ಮಿದುಳಿನ ರಕ್ತ ಸ್ರಾವ ತಡೆಯಲು ಸಾಧ್ಯವಾಯಿತು.

- ಡಾ. ನಿಶ್ಚಿತಾ, ನಂಜಪ್ಪ ಲೈಫ್‌ಕೇರ್‌ನ ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net