ಹುಣಸೂರಲ್ಲಿ ಸಹಜ ಸ್ಥಿತಿಯತ್ತ ಜನಜೀವನ

HUN-JUNE-8-1(HUNSUR BUS STAND AFTER UNLOOCK 1)
Published on

ಹುಣಸೂರು: ಹೋಟೆಲ್ ಸೇರಿದಂತೆ ಇತರ ಉದ್ಯಮಗಳಿಗೆ ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಮೊದಲ ದಿನವಾದ ಸೋಮವಾರ ಪಟ್ಟಣದಲ್ಲಿ ಜನಜೀವನ ಎಂದಿನಂತೆ ಕಂಡು ಬಂತು.

ಸತತ 75ದಿನಗಳ ನಂತರ ಲಾಕ್‌ಡೌನ್ ಸಡಿಲಗೊಂಡ ನಂತರ ಪಟ್ಟಣದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಜನಜಂಗುಳಿ ಕಂಡು ಬಂತು. ಮೈಸೂರಿಗೆ ಪ್ರಯಾಣಿಸಲು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಅಲ್ಲದೆ ಗ್ರಾಮಾಂತರ ಮತ್ತು ಅಕ್ಕಪಕ್ಕದ ಕೆ.ಆರ್.ನಗರ, ಎಚ್.ಡಿ.ಕೋಟೆ ತಾಲೂಕಿಗೂ ಬಸ್ ಸೇವೆ ಆರಂಭಗೊಂಡಿತು.

ಹೊಟೇಲ್‌ಗಳು ಆರಂಭ: ಪಟ್ಟಣದಾದ್ಯಂತ ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೊಟೇಲ್‌ಗಳನ್ನು ತೆರೆಯಲಾಗಿದೆ. ಆದರೆ ಫಾಸ್ಟ್‌ಫುಡ್, ಪಾನಿಪೂರಿ, ಗೋಬಿಮಂಚೂರಿ ಅಂಗಡಿಗಳಿಗೆ ಇನ್ನೂ ಅನುಮತಿ ನೀಡದ ಕಾರಣ ತೆರೆದಿರಲಿಲ್ಲ. ಎರಡು ತಿಂಗಳಿನಿಂದ ಹೊಟೇಲ್‌ನಲ್ಲಿ ಟೀ, ಕಾಫಿ ಕುಡಿಯದೆ ಬೇಸತ್ತಿದ್ದ ಜನರು, ಬಾಗಿಲು ತೆರೆಯುತ್ತಿದ್ದಂತೆ ಸಂತಸದಿಂದ ಹೊಟೇಲ್‌ಗೆ ಹೋಗಿ ಕಾಫಿ ಕುಡಿದರು. ಬೆಳಗಿನ ವಾಕಿಂಗ್‌ಗೆ ಬರುವ ಜನರಲ್ಲಿ ಸಾಕಷ್ಟು ಜನ ವಾಕಿಂಗ್ ಮುಗಿಸಿ ಹೊಟೇಲ್‌ನಲ್ಲಿ ಕಾಫೀ, ಟೀ ಹೀರುತ್ತಿದ್ದ ದೃಶ್ಯ ಕಂಡುಬಂತು.

ಗದ್ದಿಗೆ ದೇವಾಲಯ ಓಪನ್: ತಾಲೂಕಿನ ಪ್ರಸಿದ್ಧ ಗದ್ದಿಗೆ ಕೆಂಡಗಣ್ಣೇಶ್ವರ ಸ್ವಾಮಿ ದೇವಾಲಯವನ್ನು ಎರಡು ತಿಂಗಳ ನಂತರ ತೆರೆಯಲಾಗಿದೆ. ಬೆಳಗ್ಗೆ 8 ಗಂಟೆಗೆ ಅರ್ಚಕರಿಂದ ದೇವರಿಗೆ ಬೆಳಗಿನ ಪೂಜೆ ನೆರವೇರಿಸಲಾಯಿತು. ಆದರೆ 15 ದಿನಗಳ ಕಾಲ ದೇವಾಲಯದಲ್ಲಿ ಅನ್ನಸಂತರ್ಪಣೆ ಇರುವುದಿಲ್ಲ. ಭಕ್ತರು ದೇವರ ದರ್ಶನದೊಂದಿಗೆ ಆರತಿ ಪಡೆಯಬಹುದು. ಅಲ್ಲದೆ ತೀರ್ಥ, ಪ್ರಸಾದ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

ಸಾರ್ವಜನಿಕ ಆಸ್ಪತ್ರೆ ಫುಲ್: ಪಟ್ಟಣದ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದಿಢೀರನೆ ಹೆಚ್ಚಾಗಿತ್ತು. ಕಳೆದೆರಡು ತಿಂಗಳಿನಿಂದ ಹೊರರೋಗಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. 800ಕ್ಕೂ ಹೆಚ್ಚು ಹೊರರೋಗಿಗಳು ಇಂದು ಚಿಕಿತ್ಸೆ ಪಡೆದಿದ್ದಾರೆಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜ್ ಅರಸ್ ತಿಳಿಸಿದ್ದಾರೆ. ಪಟ್ಟಣದ ಎಸ್‌ಜೆ, ಬಜಾರ್ ಮತ್ತು ಜೆಎಲ್‌ಬಿ ರಸ್ತೆಗಳಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ಹೀಗಾಗಿ ವ್ಯಾಪಾರ ವಹಿವಾಟು ಸ್ವಲ್ಪಮಟ್ಟಿಗೆ ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net