

ಶಿವಮೊಗ್ಗ: ಸಮರ್ಪಕ ವಿದ್ಯೆ, ಸರಿಯಾದ ಜ್ಞಾನ, ಯೋಗ್ಯವಾದ ಮಾರ್ಗದರ್ಶನದಿಂದ ಪ್ರತಿಯೊಬ್ಬರ ಜೀವನ ಪಾವನವಾಗುತ್ತದೆ. ಸನ್ಮಾರ್ಗ, ಒಳ್ಳೆಯ ಚಿಂತನೆ ಮತ್ತು ಉತ್ತಮ ಕಾರ್ಯಗಳಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಲು ಸಾಧ್ಯ ಎಂದು ವಾರಾಣಸಿಯ ಧಾರ್ಮಿಕ ಸಂಸ್ಥೆ ವಿಹಂಗಮ ಯೋಗ ಸಮಾಜದ ಸಂತ ವಿಜ್ಞಾನ್‌ದೇವ್ ಜೀ ಮಹಾರಾಜ್ ಅಭಿಪ್ರಾಯಪಟ್ಟರು.
ವಿಹಂಗಮ ಯೋಗ ಸಮಾಜದಿಂದ ಸಮರ್ಪಣ ದೀಪ ಅಧ್ಯಾತ್ಮ ಮಹೋತ್ಸವದ 25 ಸಾವಿರ ಕುಂಡಗಳ ಸ್ವರ್ವೇದ ಜ್ಞಾನ ಮಹಾಯಜ್ಞದ ಅಂಗವಾಗಿ ನಗರದ ಕಲ್ಲಹಳ್ಳಿಯ ಶಿವಗಂಗಾ ಯೋಗಕೇಂದ್ರದಲ್ಲಿ ಏರ್ಪಡಿಸಿದ್ದ ಜೈ ಸ್ವರ್ವೇದ ಕಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
500ಕ್ಕೂ ಹೆಚ್ಚು ಯೋಗಾಭ್ಯಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಇದು ಇಲ್ಲಿನವರ ಸಂಸ್ಕಾರಕ್ಕೆ ನಿದರ್ಶನ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.
ಮಹಾಯಜ್ಞದ ಶಿವಮೊಗ್ಗ ಸಂಚಾಲಕ ಎಂ.ಎನ್.ಸುಂದರರಾಜ್ ಮಾತನಾಡಿ, ವಾರಾಣಸಿಯಲ್ಲಿ ಮುಂದಿನ ತಿಂಗಳ ಕೊನೆಯ ವಾರ ಲೋಕಲ್ಯಾಣಾರ್ಥವಾಗಿ 25 ಸಹಸ್ರ ಕುಂಡಗಳಲ್ಲಿ ಹೋಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗುರುಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸ್ವರ್ವೇದ ಸಂದೇಶ ಯಾತ್ರೆ ಕೈಗೊಂಡಿದ್ದಾರೆ. ಅದರ ಭಾಗವಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಯೋಗ ಗುರು ಸಿ.ವಿ.ರುದ್ರಾರಾಧ್ಯ, ಯೋಗಬಂಧು ಜಿ.ವಿಜಯಕುಮಾರ್, ರಶ್ಮಿ ನಾಗರಾಜ್, ಸಂತ ಕಿಶನ್‌ಲಾಲ್ ಜೀ, ಮುಕ್ತಿ ರಂಜನ್ ಇತರರಿದ್ದರು.