ಶರಣರ ಸದ್ವಿಚಾರದಿಂದ ಬದುಕು ಅರ್ಥಪೂರ್ಣ

SHRAVANA SANJE
ತುಮರಿಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಜಡೆ ಸಂಸ್ಥಾನ ಮಠದ ಕುಮಾರಕೆಂಪಿನ ಶ್ರೀ ಸಿದ್ದವೃಷಭೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಪ್ರಭುಲಿಂಗ ಮಹಾಸ್ವಾಮಿ, ಶಿವಲಿಂಗೇಗೌಡ, ಶಿವರಾಜ ಗೌಡ, ನಾಗರಾಜ ಗೌಡ, ಶಿವಾಜಿ ಗೌಡ ಇತರರಿದ್ದರು.
Published on

ಸೊರಬ: ಪುರಾಣ ಪುಣ್ಯ ಪ್ರವಚನಗಳನ್ನು ಕೇಳಿದಾಗ, ಶಿವಶರಣರ ಸದ್ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮನುಷ್ಯನ ಬದುಕು ಅರ್ಥಪೂರ್ಣವಾಗಲು ಮತ್ತು ನೆಮ್ಮದಿ ಕಾಣಲು ಸಾಧ್ಯ ಎಂದು ಜಡೆ ಸಂಸ್ಥಾನ ಮಠದ ಕುಮಾರಕೆಂಪಿನ ಶ್ರೀ ಸಿದ್ದವೃಷಭೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಜಡೆ ಹೋಬಳಿಯ ತುಮರಿಕೊಪ್ಪ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಾನುವಾರ ಆಯೋಜಿಸಿದ್ದ ನಮ್ಮ ನಡೆ -ಹಳ್ಳಿಗಳ ಕಡೆ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಮ್ಮ ನಿತ್ಯ ಜೀವನದಲ್ಲಿ ನಾವು ಏನನ್ನು ಕೇಳುತ್ತೇವೆಯೋ ಅದರಲ್ಲಿ ಉತ್ತಮ, ಸಂಸ್ಕಾರಯುತ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮನನ ಮಾಡುವುದೇ ಶ್ರಾವಣ ಮಾಸದ ವಿಶೇಷ. ಭರತ ಭೂಮಿಯಲ್ಲಿ ಸಂಸ್ಕಾರಗಳಿವೆ. ಇದರಿಂದಲೇ ನಾಡಿನ ಮಹತ್ವ ಹಿರಿದಾಗಿದೆ ಎಂದರು.
ಶರೀರ ಒಂದು ಮನೆಯಿದ್ದಂತೆ. ಇದರೊಳಗೆ ದುಷ್ಟ ಶಕ್ತಿಗಳು, ಕಲ್ಮಶಗಳು ಬಾರದಂತೆ ತಡೆಯಬೇಕಾದರೆ ಆಧ್ಯಾತ್ಮಿಕ ಪುಣ್ಯ ಪ್ರವಚನಗಳಲ್ಲಿ ಭಾಗವಹಿಸಬೇಕು. ಯೋಗ, ಧ್ಯಾನ, ಪ್ರವಚನ, ಪ್ರಾರ್ಥನೆಗಳು ಬದುಕಿಗೆ ನೈತಿಕ ಮೌಲ್ಯಗಳನ್ನು ತುಂಬುತ್ತವೆ. ಒಳ್ಳೆಯ ಗುಣಗಳನ್ನು ಹೊಂದಿದವರಲ್ಲಿ ದೈವತ್ವ ಕಾಣಬಹುದು. ನೆಮ್ಮದಿಯ ಬದುಕಿಗೆ ಶರಣರ ಸದ್ವಿಚಾರ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಘೋಡಗೇರಿ ವಿರಕ್ತಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿ ಮಾತನಾಡಿ, ಬಸವಾದಿ ಶರಣರ ವಚನಗಳಲ್ಲಿ ಅಡಗಿರುವ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಎಪಿಎಂಸಿ ಮಾಜಿ ಸದಸ್ಯ ಶಿವರಾಜ ಗೌಡ, ನಾಗರಾಜ ಗೌಡ, ಶಿವಾಜಿ ಗೌಡ, ವೀರಪ್ಪ ಗೌಡ, ದೇಸಾಯಿ ಗೌಡ, ಚನ್ನಬಸವ ಗೌಡ, ಆಕಾಶ್ ಗೌಡ, ರೇಣುಕಮ್ಮ, ಜಯಮ್ಮ, ಬಸಮ್ಮ, ವಸಂತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net