ವಿವೇಚನೆ, ವಿಶ್ಲೇಷಿಸುವ ಜಾಣ್ಮೆ ಇದ್ದರೆ ಜೀವನ ಅರ್ಥಪೂರ್ಣ

DV Gundappa
Published on
 ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ|

ಅನುವಪ್ಪುದೊಂದೊಂದು ರೋಗಕೊಂದೊಂದು||

ನಿನಗಮಂತೆಯೆ ನೂರು ನೀತಿಸೂತ್ರಗೊಳಿರಲು|

ಅನುವನರಿವುದೆ ಜಾಣು-ಮಂಕುತಿಮ್ಮ||935||

ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲದರಲ್ಲೂ ಔಷಧೀಯ ಗುಣವಿರುವುದು ಹೌದು. ಪ್ರತಿಯೊಂದು ಕೂಡ ದೇಹದಲ್ಲಿರುವ ಒಂದೊಂದು ರೋಗಕ್ಕೂ ಸರಿಹೊಂದುವ ಮದ್ದಾಗುತ್ತದೆ. ಹಾಗೆಯೇ ಜಗತ್ತಿನಲ್ಲಿ ನೂರು ನೀತಿಸೂತ್ರಗಳಿವೆ. ಅವುಗಳಲ್ಲಿ ಸೂಕ್ತವಾದುದು ಯಾವುದೆಂದು ಅರಿತುಕೊಳ್ಳುವುದೆ ಜಾಣತನ ಎನ್ನುತ್ತದೆ ಈ ಕಗ್ಗ.

ಕರಿಮೆಣಸು, ಹಿಪ್ಪಲಿ,ಶುಂಠಿ, ಜೀರಿಗೆ ಮುಂತಾದ ಸಂಭಾರ ಪದಾರ್ಥಗಳಲ್ಲಿ ಔಷಧೀಯ ಗುಣವಿದೆ. ದೇಹದ ಸಣ್ಣಪುಟ್ಟ ಅಸ್ವಸ್ಥತೆಗೆ ಇವುಗಳನ್ನು ಸೇವಿಸುವುದು ಸರ್ವೆಸಾಮಾನ್ಯ. ಹಾಗೆಂದು ಅತಿಯಾಗಿ ಸೇವಿಸಿದರೆ ಇನ್ನೊಂದು ಅಸ್ವಸ್ಥತೆಗೆ ಕಾರಣವಾಗಬಹುದು. ಶರೀರದ ರೋಗದ ಕಾರಣವನ್ನು ತಿಳಿದುಕೊಂಡು ಸೂಕ್ತ ರೀತಿಯಿಂದ ಸೇವಿಸಬೇಕು. ಇವಷ್ಟೇ ಅಲ್ಲ ದೇಹಕ್ಕೆ ಉತ್ತಮವೆನ್ನುವ ಯಾವುದೇ ನೈಸರ್ಗಿಕ ವಸ್ತುವಾದರೂ, ದೇಹದ ಅಗತ್ಯವನ್ನು ತಿಳಿದು ಸೇವಿಸಿದರೆ ಉತ್ತಮ ಪರಿಣಾಮವನ್ನು ಕಾಣಬಹುದು. ಹಿರಿಯರು ತಮ್ಮ ಅನುಭವದಿಂದ ಇವುಗಳ ಬಳಕೆ, ಬಳಕೆಯ ಕ್ರಮಗಳ ಬಗೆಗೆ ವಿವರಿಸಿದ್ದಾರೆ. ತನ್ನ ದೇಹಪ್ರಕೃತಿಗನುಸಾರವಾಗಿ ಸೇವಿಸುವ ಜಾಣ್ಮೆಯಿದ್ದರೆ ಔಷಧಿಯು ಪ್ರಯೋಜನಕ್ಕೆ ಬರಬಹುದು. ರೋಗಮುಕ್ತರಾಗಬಹುದು. ಹೀಗೆಯೇ ಲೋಕದಲ್ಲಿ ನೂರಾರು ನೀತಿಸೂತ್ರಗಳಿವೆ. ವಿವಿಧ ಬಗೆಯ ನಂಬಿಕೆ, ಮತ-ಸಿದ್ಧಾಂತಗಳಿವೆ. ನಡೆಯಲು ಹೊರಟವನು ತಾನು ನಡೆಯಬೇಕಾದ ದಾರಿಯನ್ನು ಆಯ್ದುಕೊಳ್ಳುವ ಜಾಣನಾಗಬೇಕು. ಒಂದಷ್ಟು ದೂರ ನಡೆದು ನೋಡೋಣ, ಸರಿ ಹೊಂದದಿದ್ದರೆ ಇನ್ನೊಂದು ದಾರಿಗೆ ಹೊರಳೋಣ ಎನ್ನುವ ಅತಿ ಬುದ್ಧಿವಂತಿಕೆಯು ಸರಿಯಲ್ಲ. ದಾರಿ ಹುಡುಕುವುದರಲ್ಲೇ ಆಯುಷ್ಯ ಕಳೆದುಹೋಗುತ್ತದೆಯೇ ವಿನಾ ಗುರಿ ತಲುಪಲು ಸಾಧ್ಯವಿಲ್ಲ. ಎಲ್ಲಾ ದಾರಿಗಳನ್ನು ಪರಸ್ಪರ ಹೋಲಿಸಿಕೊಳ್ಳುತ್ತಾ ಮನಸ್ಸು ಗೊಂದಲದ ಗೂಡಾಗಬಹುದು, ಜಡವಾಗಬಹುದು. ಅದಕ್ಕಾಗಿ ವ್ಯಕ್ತಿಯು ತನ್ನ ಮನಸ್ಸಿಗೆ ಒಪ್ಪುವ, ಆಸಕ್ತಿ-ಅಭಿರುಚಿಗೆ ಪೂರಕವಾದ, ಆದರ್ಶಗಳಿಗೆ ಸರಿಹೊಂದುವ ನೀತಿಸೂತ್ರವನ್ನು ಅರಿತು ಆಯ್ದುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬದುಕಿನ ಬೇನೆ- ಬೇಸರ, ನೋವು- ನಿರಾಶೆಗಳನ್ನು ಎದುರಿಸಿ, ಜೀವನವನ್ನು ಅರ್ಥಪೂರ್ಣವಾಗಿಸಬಲ್ಲ ಮತ-ಸಿದ್ಧಾಂತಗಳನ್ನು ಸ್ವೀಕರಿಸಬೇಕು. ಗುರು-ಹಿರಿಯರು ಅನುಸರಿಸಿಕೊಂಡು ಬಂದ ಜೀವನ ನೀತಿ,ಸಿದ್ಧಾಂತಗಳು ಪೊಳ್ಳಲ್ಲ. ಸತ್ಯವನ್ನು ಹೇಳುವುದು, ಮಾನವೀಯತೆಯಿಂದ ನಡೆದುಕೊಳ್ಳುವುದು, ಅಹಿಂಸೆಯನ್ನು ಪಾಲಿಸುವುದು ಮುಂತಾದ ಸದಾಚಾರಗಳು ಎಲ್ಲಾ ಕಾಲಕ್ಕೂ ಎಲ್ಲಾ ದೇಶ-ಜನಾಂಗ

ಗಳಿಗೂ ಸ್ವೀಕಾರಾರ್ಹವಾದ ಜೀವನ ಮೌಲ್ಯಗಳಾಗಿವೆ. ಕೆಲವೊಂದು ಮೂಢ ಆಚರಣೆಗಳು, ಅನರ್ಥಕಾರಿ ನಂಬಿಕೆಗಳು, ಅಂಧ ಶ್ರದ್ಧೆಗಳನ್ನು ಗಾವಿಲರಂತೆ ಅನುಸರಿಸುವುದು ಮೂರ್ಖತನ. ಬದಲಾದ ಕಾಲ ಮತ್ತು ಸಾಮಾಜಿಕ ಜನಜೀವನಕ್ಕೆ ಅನುಗುಣವಾಗಿ ಜೀವನ ನೀತಿಯನ್ನು ಬದಲಾಯಿಸಿಕೊಳ್ಳುವ ವಿವೇಚನೆಯು ಅತ್ಯಗತ್ಯ. ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ನೀತಿಯು ಸ್ವೀಕಾರಾರ್ಹವಲ್ಲ.

ಬಾಲ್ಯದಲ್ಲಿ ಹಿರಿಯರ ನೆರಳಿನಲ್ಲಿ ನಡೆಯುವ ಮಗುವು ಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ತನ್ನದೆ ವ್ಯಕ್ತಿತ್ವನ್ನು ಬೆಳೆಸಿಕೊಳ್ಳುತ್ತಾನೆ. ಆತನು ಪಡೆದ ಶಿಕ್ಷಣ, ಆತನಿರುವ ಪರಿಸರ-ಒಡನಾಟಗಳು ಅವನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ. ಹಲವರು ತಾವು ತೆಗೆದುಕೊಳ್ಳುವ ನಿರ್ದಾರ, ತಮ್ಮ ನಿಲುವುಗಳ ಬಗೆಗೆ ವಿಮಶಿಸುವ ಪ್ರಯತ್ನವನ್ನೇ ಮಾಡುವುದಿಲ್ಲ. ಗುರು-ಹಿರಿಯರು, ತಾವು ನಂಬುವ ನಾಯಕರು ತೆಗೆದುಕೊಂಡ ತೀರ್ವನವನ್ನೆ ಒಪ್ಪಿ ನಡೆಯುತ್ತಾರೆ. ಆದರೆ ಎಲ್ಲಾ ನೀತಿ-ಸಿದ್ದಾಂತಗಳು ಎಲ್ಲಾ ಕಾಲಕ್ಕೂ ಅನ್ವಯವಾಗುವಂತಹುದಲ್ಲ. ರೋಗವೇನು ಎಂದು ತಿಳಿದು ಅದಕ್ಕೆ ಹೊಂದುವಂತೆ ಮೆಣಸು, ಹಿಪ್ಪಲಿ, ಜೀರಿಗೆಗಳನ್ನು ಔಚಿತ್ಯಪೂರ್ಣವಾಗಿ ಬಳಸಿದರಷ್ಟೇ ರೋಗಶಮನ. ಇಲ್ಲದಿದ್ದರೆ ರೋಗವು ಉಲ್ಬಣವಾದೀತು. ಹೊಸ ಪಿಡುಗಿಗೆಕಾರಣವಾದೀತು. ಅಂತೆಯೇ ಯಾವುದೇ ಮತ, ಪಕ್ಷ, ನೀತಿ-ಆದರ್ಶಗಳನ್ನು ಅನುಸರಿಸುವುದಿದ್ದರೂ ಆಳವಾಗಿ ಯೋಚಿಸಬೇಕು.ದೇಶವೆನ್ನುವ ದೇಹದಲ್ಲಿ ಪುಟ್ಟದೊಂದು ಅಂಗದಂತೆ ಪ್ರಜೆ.ಆತನು ತೆಗೆದುಕೊಳ್ಳುವ ಅವಸರದ ತೀರ್ವನ, ಅಂಧ ಅನುಕರಣೆ, ಹೊಣೆಗೇಡಿತನವು ದೇಶದ ಸ್ವಾಸ್ಥ್ಯಕ್ಕೆ ತೊಂದರೆ ಉಂಟು ಮಾಡಬಹುದು. ದೇಹದಲ್ಲಿ ಯಾವುದೋ ಒಂದು ಅಂಗಕ್ಕೆ ಹಾನಿಯಾದರೂ ಪೂರ್ತಿ ದೇಹವೇ ಆ ನೋವನ್ನು ಅನುಭವಿಸುವಂತೆಯೇ ದೇಶವು ಕೂಡಾ ತಪ್ಪು ನೀತಿ-ಸಿದ್ಧಾಂತಗಳಿಂದ ಅಪಾಯಕ್ಕೆ ಈಡಾಗಬಹುದು. ಒಳಿತು ಯಾವುದು ಎನ್ನುವ ಪ್ರಶ್ನೆಗೆ ವಿಭಿನ್ನ ಉತ್ತರಗಳಿರ

ಬಹುದು. ಅವರವರ ಅನುಭವ ಮತ್ತು ವಿವೇಚನೆಗೆ ಸಂಬಂಧಿಸಿ ಒಳಿತಿನ ಗುರುತಿಸುವಿಕೆ. ಆದರೆ ಸಮಷ್ಟಿಗೆ ಹಿತವನ್ನುಂಟು ಮಾಡುವ ಜೀವನನೀತಿ, ಲೋಕ ಕ್ಷೇಮಕ್ಕೆ ಧಕ್ಕೆಯಾಗದ ಸಿದ್ಧಾಂತಗಳು, ಸರ್ವರ ಹಿತ ಬಯಸುವ ಆದರ್ಶಗಳು ವ್ಯಕ್ತಿ ಮತ್ತು ನಾಡಿನ ಪ್ರಗತಿಗೆ ಅತ್ಯಗತ್ಯ. ವಿವೇಚಿಸುವ, ವಿಶ್ಲೇಷಿಸುವ ಜಾಣ್ಮೆ ಇದ್ದರೆ ಜೀವನ ಅರ್ಥಪೂರ್ಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net