

ಸಾಗರ: ಅಡುಗೆ ಅನಿಲ ಬೆಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಮೂಲ ಕಾರಣವೇ ಬಿಜೆಪಿ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತದಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಲು ಕಾರಣವಾಗಿದೆ. ತೆರಿಗೆ ಭಯೋತ್ಪಾದನೆಯಿಂದ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಿಂದ ಸಂಗ್ರಹವಾಗುವ ತೆರಿಗೆಯನ್ನು ಪಡೆಯುವ ಕೇಂದ್ರ ಸರ್ಕಾರ ವಾಪಸ್ ರಾಜ್ಯಕ್ಕೆ ಕೊಡುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರಗಳು ಅನಿವಾರ್ಯವಾಗಿ ಅಲ್ಪಸ್ವಲ್ಪ ತೆರಿಗೆ ಏರಿಸುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲವಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಿಗೆಯನ್ನು ಯಾವ ಕಾರಣಕ್ಕೂ ಹೆಚ್ಚಿಸುತ್ತಿರಲಿಲ್ಲ. ಕೇಂದ್ರದಲ್ಲಿ ತೆರಿಗೆ ಹಾಕುವ ಪ್ರವೃತ್ತಿ ಮುಂದುವರಿದರೆ ಜನಸಾಮಾನ್ಯರ ಸ್ಥಿತಿ ಚಿಂತಾಜನಕವಾಗಲಿದೆ. ಆರ್ಥಿಕ ತಜ್ಞರ ಪ್ರಕಾರ 60 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಸಾಲ ಮಾಡಿದರೆ ತೀರಿಸಲು ಸಾಧ್ಯವಾಗುವುದಿಲ್ಲ. ಈಗಾಗಲೆ 180 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ದೇಶ ಸಂಪೂರ್ಣ ಅಧೋಗತಿಗೆ ಹೋಗುತ್ತಿದೆ. ಜನ ಬೀದಿಗಿಳಿದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಬಿಜೆಪಿಯದು ಪ್ರಾಮಾಣಿಕವಾದ ಹೋರಾಟವೇ ಅಲ್ಲ. ಕಾಂಗ್ರೆಸ್ ಪಕ್ಷ ಗಾಂಧೀಜಿ ಅವರ ಹೋರಾಟದ ಪ್ರೇರಣೆಯಿಂದಲೇ ಎಲ್ಲ ಹೋರಾಟವನ್ನೂ ರೂಪಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಜನರ ಸುಲಿಗೆ ಮಾಡಿ ಅಧಿಕಾರ ನಡೆಸುವ ಆಲೋಚನೆಗಳಿಲ್ಲ. ಅದೇನಿದ್ದರೂ ಬಿಜೆಪಿಯವರ ಚಿಂತನೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆದಾಳುತ್ತ ಹೊಟ್ಟೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರಾಧ್ಯಕ್ಷ ಐ.ಎನ್.ಸುರೇಶಬಾಬು, ಪ್ರಮುಖರಾದ ಚಂದ್ರಮೌಳಿ, ಮಹೇಂದ್ರ, ಚಿದಂಬರ, ಹೊಳೆಯಪ್ಪ, ಕನ್ನಪ್ಪ, ಮಹಾಬಲ ಕೌತಿ, ಮಧುಮಾಲತಿ, ಗಣಪತಿ ಮಂಡಗಳಲೆ, ಚಂದ್ರಪ್ಪ, ಉಮೇಶ್, ಚಿನ್ಮಯ್, ಉಷಾ, ಮೈಕೆಲ್ ಡಿಸೋಜ ಇತರರಿದ್ದರು.