

ಶಿವಮೊಗ್ಗ: ಚಿಂತೆ ಮಾಡುವ ಬದಲು ಚಿಂತನೆ ಮಾಡಬೇಕು. ಪರಿಹಾರವಿಲ್ಲದ ಚಿಂತೆಯನ್ನು ಬಿಟ್ಟುಬಿಡಬೇಕು. ಬಿಡಿಸಲಾರದ ಸಮಸ್ಯೆಯನ್ನು ಸಂತೋಷದಿಂದ ಒಪ್ಪಿಕೊಳ್ಳಬೇಕು ಎಂದು ಬಾಳಗಾರು ಆರ್ಯ ಅಕ್ಷೋಭ್ಯ ಮಠದ ಶ್ರೀ ರಾಮಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಅಷ್ಟೋತ್ತರ ಬಳಗದಿಂದ ಏರ್ಪಡಿಸಿರುವ ಜ್ಞಾನ ಪ್ರಸರಣ ಸಪ್ತಾಹದ ಮೂರನೇ ದಿನ ಗಾಯತ್ರಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶ್ರೀಪಾದಂಗಳವರು, ಅನುಗಾಲವೂ ಚಿಂತೆ ಜೀವಕ್ಕೆ ಎಂಬ ದಾಸವಾಣಿಯು ಸಾಮಾನ್ಯ ಜನರ ಸ್ವಭಾವವನ್ನು ತಿಳಿಸುತ್ತದೆ. ಗೃಹಸ್ಥರಿಗೆ ಚಿಂತನೆ, ಮುನ್ನಾಲೋಚನೆ ಅವಶ್ಯವಾಗಿ ಇರಲೇಬೇಕು. ಇದರಿಂದ ಸುಲಭವಾಗಿ ಜೀವನ ಸಾಗಿಸಬಹುದು ಎಂದು ತಿಳಿಸಿದರು.
ಚಿಂತೆ ಮನುಷ್ಯನ ದೌರ್ಬಲ್ಯವನ್ನು ತೋರಿಸುತ್ತದೆ. ಅದನ್ನು ಮೆಟ್ಟಿ ನಿಲ್ಲಬೇಕು. ಮೋಹವನ್ನು ಬಿಟ್ಟವರು ಆರಾಮವಾಗಿರುತ್ತಾರೆ. ಕರ್ತವ್ಯವನ್ನು ಬಿಡಬಾರದು. ಜೀವನ ಎಂಬುದು ಅಮೃತ ಮಥನವಿದ್ದಂತೆ. ಮಥನದಲ್ಲಿಯ ಹಗ್ಗ ಎಂದರೆ ಜೀವನದ ಸೂತ್ರ. ಅದರಲ್ಲಿ ಕರ್ತವ್ಯ ಮಾಡಬೇಕು. ಧೀರರಿಗೆ ದೇವರ ಸಹಾಯ ಇದ್ದೇ ಇರುತ್ತದೆ ಎಂದರು.
ಶಿವಮೊಗ್ಗ ತಾಲೂಕು ಬ್ರಾಹ್ಮಣ ಸೇವಾ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಳಗಾರು ಗುರುರಾಜ್ ಶ್ರೀಪಾದಂಗಳವರ ಪರಿಚಯಿಸಿದರು. ಶೇಷಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಷ್ಟೋತ್ತರ ಬಳಗದ ಸದಸ್ಯರಾದ ಅಚ್ಚುತ ರಾವ್, ರಾಘವೇಂದ್ರ ಆನವಟ್ಟಿ, ಮಧ್ವೇಶ, ರಾಘವೇಂದ್ರ ವೈದ್ಯ, ವೇದವ್ಯಾಸ, ಧಿರೇಂದ್ರ ಆಚಾರ್, ರಮೇಶ್, ಧ್ರುವ ಇತರರಿದ್ದರು.