ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ

ನ್ಯಾಯಾಲಯ
ನ್ಯಾಯಾಲಯ
Published on

ಪಾಂಡವಪುರ: ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಕೊಲೆ ಮಾಡಿದ್ದವನಿಗೆ ಶ್ರೀರಂಗಪಟ್ಟಣ 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ 5,000 ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪಟ್ಟಣದ ಗ್ರೀನ್ ಪಾರ್ಕ್ ಹೋಟೆಲ್‌ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ ಪಟ್ಟಣದ ಶಾಂತಿನಗರ ನಿವಾಸಿ (ಮೂಲ ನಾಗಮಂಗಲ ತಾಲೂಕಿನ ಪಡುವಲಪಟ್ಟಣ) ಕೃಷ್ಣ ಅಲಿಯಾಸ್ ರವಿ ಶಿಕ್ಷೆಗೆ ಗುರಿಯಾದವ.

ಗ್ರಾಹಕರು ನೀಡುವ ಟಿಪ್ಸ್ ವಿಚಾರವಾಗಿ ಕೃಷ್ಣ ಮತ್ತು ಅದೇ ಹೋಟೆಲ್‌ನಲ್ಲಿ ಸಪ್ಲೇಯರ್ ಆಗಿದ್ದ ಚಾಮರಾಜನಗರ ಮೂಲದ ಮಂಜ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಕೃಷ್ಣ ತನ್ನ ಸಹೋದ್ಯೋಗಿ ಮಂಜನನ್ನು ತರಕಾರಿ ಕತ್ತರಿಸುವ ಚಾಕುವಿನಿಂದ 2022 ರ ಅ.3 ರಂದು ರಾತ್ರಿ 11ರ ಸಮಯದಲ್ಲಿ ಕತ್ತು ಕೊಯ್ದು ಕೊಲೆ ಮಾಡಿದ್ದ. ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಆರ್.ವಿವೇಕಾನಂದ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ.

ಸರ್ಕಾರಿ ಅಭಿಯೋಜಕರಾಗಿ ಎಂ.ಕೆ.ಪ್ರಫುಲ್ಲಾ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net