

ಎನ್.ಆರ್.ಪುರ: ಆಯುರ್ವೇದ ಔಷಧಿ ಸೇವಿಸುವುದರಿಂದ ಆಯಸ್ಸು ವೃದ್ಧಿಯಾಗಲಿದೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೊನೋಡಿ ಗಣೇಶ್ ಹೇಳಿದರು.
ಅವರು ಭಾನುವಾರ ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ವಿಪ್ರ ಮಹಿಳಾ ಬಳಗದಿಂದ ಏರ್ಪಡಿಸಿದ್ದ ವಿಪ್ರ ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ಸ್ವಸಹಾಯ ಸಂಘಗಳಿಗೆ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡಿದ ಸಹಾಯಧನದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಿಡ ಮೂಲಿಕೆಗಳ ಔಷಧಿಗೆ ಮೌಲ್ಯವಿದೆ. ಗ್ರಾಮೀಣ ಭಾಗದಲ್ಲಿ ಪಾರಂಪರಿಕ ಔಷಧಿ ನೀಡುವ ಪಂಡಿತರಿದ್ದಾರೆ. ಅವರು ಸೇವೆಯ ರೂಪದಲ್ಲಿ ಔಷಧಿ ನೀಡುತ್ತಾರೆ. ಇಬ್ಬರು ಮಹಿಳೆಯರು ಪ್ರತಿಲಾಪೇಕ್ಷೆ ಇಲ್ಲದೆ ಗಿಡಮೂಲಿಕೆ ಔಷಧಿ ನೀಡುತ್ತಿರುವುದನ್ನು ವಿಪ್ರ ಮಹಿಳಾ ಬಳಗದವರು ಗುರುತಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವಿಪ್ರ ಮಹಿಳಾ ಬಳಗದ ಸದಸ್ಯೆ ಅನ್ನಪೂರ್ಣ ಮಾತನಾಡಿ, ಗಿಡಮೂಲಿಕೆ ಔಷಧಿ ನೀಡುತ್ತಿರುವ ಇಬ್ಬರು ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡುತ್ತಿದ್ದೇವೆ. ಅಲ್ಲದೆ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ 1 ಲಕ್ಷ ರೂ. ಬಂದಿದ್ದು ಇದನ್ನು 3 ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ವಿಜಯಶ್ರೀ ಸದಾಶಿವಭಟ್, ತಾಲೂಕು ಬ್ರಾಹ್ಮಣ ಮಹಾ ಸಭಾದ ಗೌರವಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಅನಿತಾ ಶ್ರೀನಾಥ್, ನಾಗಲಕ್ಷ್ಮೀ ರವಿಶಂಕರ್, ಇತರರಿದ್ದರು.
ಗಿಡಮೂಲಿಕೆ ಔಷಧಿ ನೀಡುತ್ತಿರುವ ಕಾನೂರು ಗ್ರಾಮದ ಬಾಳೆಹಿತ್ತಲು ಭಾರತಿ ನಾರಾಯಣಸ್ವಾಮಿ ಹಾಗೂ ಅಗ್ರಹಾರದ ರಾಜಲಕ್ಷ್ಮೀ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. 3 ಮಹಿಳಾ ಸ್ವಸಹಾಯ ಗುಂಪುಗಳಿಗೆ ಚೆಕ್ ವಿತರಿಸಲಾಯಿತು.