

ಗೋಣಿಕೊಪ್ಪಲು: ಭಾರತೀಯ ಜೀವ ವಿಮಾ ನಿಗಮಕ್ಕೆ 69 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿರಾಜಪೇಟೆ ಶಾಖಾ ವತಿಯಿಂದ ವಿಮಾ ಜಾಗೃತಿ ಕಾರ್ಯಕ್ರಮವು ಎಲ್‌ಐಸಿಯ ಪ್ರತಿನಿಧಿಗಳಿಂದ ಜಾಥಾ ನಡೆಸುವ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯ ಯಶಸ್ವಿಯಾಗಿ ಜರುಗಿತು.
ವಿರಾಜಪೇಟೆಯ ಶಾಖಾ ವ್ಯವಸ್ಥಾಪಕ ಮಧುಸೂದನ್ ಅವರ ಮುಂದಾಳತ್ವದಲ್ಲಿ 80ಕ್ಕೂ ಅಧಿಕ ಎಲ್‌ಐಸಿ ಪ್ರತಿನಿಧಿಗಳು ತಮ್ಮ ಕಚೇರಿಯಿಂದ ಜಾಥಾ ಆರಂಭಿಸಿ, ನಗರದ ಗಡಿಯಾರ ಕಂಬ, ಬಸ್ ನಿಲ್ದಾಣ ಮಾರ್ಗವಾಗಿ ಚೌಕಿ ದಾಟಿ ಕಚೇರಿಯಲ್ಲಿ ಜಾಥಾ ಮುಕ್ತಾಯಗೊಂಡಿತು. ಎಲ್‌ಐಸಿಯ 80ಕ್ಕೂ ಅಧಿಕ ಪ್ರತಿನಿಧಿಗಳು ಜಾಥಾದಲ್ಲಿ ಭಾಗವಹಿಸಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಘೋಷಣೆಗಳನ್ನು ಮೊಳಗಿಸಿದರು.
ವಿರಾಜಪೇಟೆ ಶಾಖಾ ವ್ಯವಸ್ಥಾಪಕ ಮಧುಸೂದನ್ ಮಾತನಾಡಿ, 2025ರ ಜ.20 ರಂದು ಒಂದೇ ದಿನ ದೇಶಾದ್ಯಂತ 4,52,839 ಪ್ರತಿನಿಧಿಗಳ ಮೂಲಕ 5,88,107 ಪಾಲಿಸಿಗಳನ್ನು ಮಾಡಿಸಿ ಗಿನ್ನೆಸ್ ದಾಖಲೆಗಳನ್ನು ಮಾಡಲಾಗಿದೆ.
ಆರ್ಥಿಕವಾಗಿ ವಾರ್ಷಿಕ 4,50,000 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಹಿಂದುಳಿದ ಕುಟುಂಬ ಹಾಗೂ 60ಕ್ಕಿಂತ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ದಾಖಲಾಗಿರುವ ಮಕ್ಕಳಿಗೆ 15 ರಿಂದ 40 ಸಾವಿರ ರೂ.ವರೆಗೆ ವಾರ್ಷಿಕವಾಗಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದರು.
ಪ್ರತಿನಿಧಿಗಳಿಗೆ ವಿವಿಧ ಚಟುವಟಿಕೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು. ಅಭಿವೃದ್ದಿ ಅಧಿಕಾರಿಗಳಿಗೆ, ಪ್ರತಿನಿಧಿಗಳನ್ನು ಈ ವೇಳೆ ಸನ್ಮಾನಿಸಿ, ಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಪ್ರತಿನಿಧಿಗಳು ಶಿಬಿರದ ಪ್ರಯೋಜನ ಪಡೆದರು. ನಿಗಮದ ಹಿರಿಯ ಅಧಿಕಾರಿಗಳು, ಹಿರಿಯ ಪ್ರತಿನಿಧಿಗಳು, ಶಾಖಾ ಸಿಬ್ಬಂದಿ ಭಾಗವಹಿಸಿದ್ದರು.