

ಕೋಲಾರ: ಜ್ಞಾನ ವೃದ್ಧಿಸುವ ಶ್ರೇಷ್ಠ ಕೆಲಸ ಗ್ರಂಥಪಾಲಕರದ್ದು. ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಾಗ ಉತ್ತಮ ಸಮಾಜ ನಿಮಾರ್ಣ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವಿಣ್ ಪಿ.ಬಾಗೇವಾಡಿ ಹೇಳಿದರು.
ನಗರದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಂಥಪಾಲಕರಿಗೆ ಕಿಟ್ ವಿತರಿಸಿ ಮಾತನಾಡಿ, ಶಿಕ್ಷಣ ಇಲಾಖೆಯ ಸಮಾನ ಜವಾಬ್ದಾರಿ ಗ್ರಂಥಪಾಲಕರ ಮೇಲಿದೆ. ಶಿಕ್ಷಣ ಒದಗಿಸುವ ಉದ್ದೇಶದಿಂದ ಸರ್ಕಾರ ಪುಸ್ತಕ ಒದಗಿಸುತ್ತಿದೆ. ಜನರ ಹಾಗೂ ಇಲಾಖೆಯ ಕೊಂಡಿಯಾಗಿ ಕೆಲಸ ಮಾಡಬೇಕು ಎಂದರು.
ಅನಕ್ಷರತೆಯನ್ನು ಹೋಗಲಾಡಿಸಿ ಸಕ್ಷರತೆ ಪ್ರಮಾಣ ಹೆಚ್ಚಿಸಲು ಗ್ರಾಮೀಣ ಭಾಗದಲ್ಲಿ ಪಂಚಾಯಿತಿಗೆ ಒಂದರಂತೆ ಗ್ರಂಥಾಲಯ ಸ್ಥಾಪನೆ ಮಾಡಲಾಗಿದ್ದು, ಓದುಗರ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ಜತೆಗೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದ್ದು, ಇದರ ಪ್ರಯೋಜನ ಸಾರ್ವಜನಿಕರಿಗೆ ತಲುಪಿಸಬೇಕು ಎಂದು ಸೂಚಿಸಿದರು.
ಈಗಾಗಲೇ ನೀಡಲಾಗಿರುವ ಪುಸ್ತಕಗಳನ್ನು ಜನರಿಗೆ ತಲುಪಿಸಬೇಕು, ಅಧಿಕಾರಿಗಳ, ಸ್ವಯಂ ಸಂಸ್ಥೆ ಮುಖ್ಯಸ್ಥರ ಸಹಕಾರ ಪಡೆದು ಓದುಗರನ್ನು ಸೆಳೆಯುವ ಪ್ರಯತ್ನ ಮಾಡಬೇಕು. ಶಿಕ್ಷಕರಷೆ್ಟೆ ಗ್ರಂಥಪಾಲಕರ ಕೆಲಸ ಇದೆ, ಹಿಂದೆ ಸಾಕ್ಷರತೆ ಬಹಳ ಕಡಿಮೆಯಿತ್ತು, ಇದೀಗ ಕೇರಳ ಜಾಸ್ತಿಯಿದ್ದು, ರಾಜ್ಯದಲ್ಲಿ ಸುಧಾರಣೆಯಾಗಿದೆ ಎಂದರು.
ಇಚೆಗೆ ಕೆಲ ಗ್ರಂಥಾಲಯಗಳಿಗೆ ಭೇಟಿ ನೀಡಿದಾಗ ಗ್ರಂಥಪಾಲಕ ಬಿಟ್ಟರೆ ಜನ ಇರಲಿಲ್ಲ, ಸಂಪನ್ಮೂಲ ಇರಲಿಲ್ಲ, ಪಿಡಿಒ, ಇಒ ಮೂಲಕ ಸಿಎಸ್ಆರ್ ಹಣ ಪಡೆದು ಮಾದರಿ ಗ್ರಂಥಾಲಯ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಒತ್ತಡ ಒಡ್ಡಿದರೆ ಅವರು ಓದಲ್ಲ, ಅವರನ್ನು ಆಕರ್ಷಿಸುವ ವಸ್ತು, ಪುಸ್ತಕಗಳ ಪ್ರದರ್ಶನ ಮಾಡಿದರೆ ಇಷ್ಟಪಟ್ಟು ಓದುತ್ತಾರೆ. ಇಂತಹ ವಾತಾವರಣ ಸೃಷ್ಟಿ ಮಾಡಬೇಕು ಎಂದು ಸಲಹೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ರಮೇಶ್ ಮಾತನಾಡಿ, ಪಂಚಾಯತ್ ರಾಜ್ ಇಲಾಖೆಯಿಂದ ಗ್ರಂಥಾಲಯಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನತೆಯನ್ನು ಅಕ್ಷರಸ್ಥರನ್ನಾಗಿ ಮಾಡಲಾಗುತ್ತಿದೆ. ಗ್ರಂಥಪಾಲಕರು ಅರಿವು ಕಾರ್ಯಕ್ರಮಗಳ ಜತೆಗೆ, ಪುಸ್ತಗಳನ್ನು ಓದುವ ಮಾನೋಭಾವ ಮೂಡಿಸಬೇಕು ಎಂದು ಹೇಳಿದರು.
* ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
ಸೂಲಿಕುಂಟೆ ಗ್ರಂಥಪಾಲಕಿ ಪ್ರಜಲ ಮಾತನಾಡಿ, ಗ್ರಂಥಾಲಯವನ್ನು ಮಕ್ಕಳು, ವಿದ್ಯಾವಂತರ ಜತೆಗೆ ಗ್ರಾಮೀಣ ಭಾಗದ ಜನತೆ ಸಹ ಉಪಯೋಗಿಸಿಕೊಳ್ಳುತ್ತಾರೆ. ಆಸಕ್ತಿಯಿರುವ ಪುಸ್ತಕವನ್ನು ಪಡೆದು ಓದುತ್ತಾರೆ. ಮಕ್ಕಳನ್ನು ಆಕರ್ಷಿಸುವ ಪುಸ್ತಕ, ವಸ್ತುಗಳ ಪ್ರದರ್ಶನ ಇಡಲಾಗಿದೆ ಎಂದರು. ರಜೆ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಿ ಸ್ಪರ್ಧಾತ್ಮಕ ಪರೀೆಗೆ ಪೂರಕವಾದ ಪುಸ್ತಕ ಅಧ್ಯಯನ ಮಾಡುತ್ತಾರೆ. ಶಾಲಾ ಮಕ್ಕಳಿಗೆ ಡಿಜಿಟಲ್ ಮೂಲಕ ಪಠ್ಯಕ್ಕೆ ಸಂಬಂಧಿಸಿದ ವಿಡಿಯೋ ತೋರಿಸಲಾಗುತ್ತದೆ. ಜತೆಗೆ ಸರ್ಕಾರಿ ವಿವಿಧ ಇಲಾಖೆಗಳ ಕಾರ್ಯಕ್ರಮ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.