ಕರ್ಮದ ಚಕ್ರದಿಂದ ಬಿಡುಗಡೆ

Buddha
Published on
ಶ್ರೀ ಸ್ಫೂರ್ತಿ
ಕರ್ಮದ ಚಕ್ರದಿಂದ ಹೊರಬರುವುದು ಹೇಗೆ? ಪ್ರತಿಕ್ರಿಯಿಸು ವುದರಿಂದ ಅಲ್ಲ. ಜ್ಞಾನದಿಂದ ಮತ್ತು ಧ್ಯಾನದಿಂದ ಕರ್ಮದ ಚಕ್ರದಿಂದ ಹೊರಬರಬಹುದು. ಭಗವಾನ್ ಬುದ್ಧನ ಓರ್ವ ಶಿಷ್ಯನು, ಬುದ್ಧನ ಸಹೋದರ ಸಂಬಂಧಿಯೂ ಆಗಿದ್ದ. ಅವನು ಬಹಳ ಬುದ್ಧಿವಂತನಾಗಿದ್ದ ಮತ್ತು ಭಕ್ತಿಯನ್ನೂ ಹೊಂದಿದ್ದ. ಆರಂಭದಲ್ಲಿ ಬುದ್ಧನ ಸಂಘವು ಚಿಕ್ಕದಾಗಿತ್ತು. ಆದರೆ ಕಾಲಕಳೆದಂತೆ ಬುದ್ಧನ ಸಂಘವು ದೊಡ್ಡದಾಗುತ್ತಾ ಹೋಯಿತು.

ಆದ್ದರಿಂದ ಬುದ್ಧನಿಗೆ ಸಮೀಪವಾಗಿದ್ದ ಕೆಲವರು ಬುದ್ಧನನ್ನು ಹಿಡಿದಿಟ್ಟುಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಆರಂಭಿಸಿದರು. ಬುದ್ಧನ ಸಹೋದರ ಸಂಬಂಧಿಯು, ಬುದ್ಧನು ಅವನಿಗೆ ಮಾತ್ರ ಸೇರಿದವನೆಂದುಕೊಂಡಿದ್ದ. ಆದರೆ ಯಾರಿಗೂ ಬುದ್ಧನ ಮೇಲೆ ಸ್ವಾಮಿತ್ವವನ್ನು ಹೊಂದಲು ಸಾಧ್ಯವಿಲ್ಲ. ಸಾಗರದ ಸ್ವಾಮಿತ್ವವನ್ನು ಹೊಂದಲು ಯಾರಿಗೂ ಸಾಧ್ಯವಿಲ್ಲ. ಇದರಿಂದ ಕೆಲವು ಅಪಾರ್ಥಗಳು ಉಂಟಾದವು ಮತ್ತು ಆ ಸಹೋದರ ಸಂಬಂಧಿಯು ಬುದ್ಧನ ವಿರುದ್ಧವಾಗಿ ತಿರುಗಿದನು.

ಬುದ್ಧ ಸುಮ್ಮನೆ ಮುಗುಳ್ನಕ್ಕ: ಕೆಲವರು ತಮ್ಮದೇ ಅಭಿಪ್ರಾಯಗಳನ್ನು ಮತ್ತು ನಕಾರಾತ್ಮಕತೆಯನ್ನು ಹೊಂದಿದ್ದಾಗ, ಅವರೊಡನೆ ಇನ್ನೂ ಕೆಲವರು ಸೇರಿಕೊಳ್ಳುತ್ತಾರೆ. ಬುದ್ಧನ ಸಹೋದರ ಸಂಬಂಧಿಯ ಒಂದು ಗುಂಪು ಈ ರೀತಿಯಾಗಿ ಆಯಿತು. ಒಂದು ದಿನ ಬುದ್ಧನು ಪ್ರವಚನವನ್ನು ನೀಡುತ್ತಿದ್ದಾಗ ಆತನು ಒಂದು ದೊಡ್ಡ ಕಲ್ಲು ಬಂಡೆಯನ್ನು ಬುದ್ಧನೆಡೆಗೆ ತಳ್ಳಿದ. ಆ ಕಲ್ಲುಬಂಡೆ ಉರುಳಿ ಬುದ್ಧನಿಂದ ಕೆಲವು ಸೆಂಟಿಮೀಟರ್​ಗಳಷ್ಟು ದೂರದಲ್ಲಿ ನಿಂತಿತು.

ಇಲ್ಲವಾದರೆ ಅದು ಬುದ್ಧನನ್ನು ಜಜ್ಜಿ ಬಿಡುತ್ತಿತ್ತು. ಬುದ್ಧನ ಇತರ ನಿಷ್ಠಾವಂತ ಶಿಷ್ಯರಿಗೆ ಬಹಳ ದುಃಖವಾಯಿತು ಮತ್ತು ಕೋಪ ಬಂದಿತು. ಇವನಿಗೆ ಬುದ್ಧಿ ಕಲಿಸಬೇಕು ಎಂದು ಅವರೆಲ್ಲರೂ ಮುಂದಾದಾಗ ಬುದ್ಧನು ಅವರನ್ನು ನಿಲ್ಲಿಸಿದ, ನಂತರ ಸುಮ್ಮನೆ ಮುಗುಳ್ನಕ್ಕ. ‘ಇದು ಕರ್ಮ. ಇದರ ಬಗ್ಗೆ ಏನೂ ಮಾಡಬೇಡಿ. ನಾವು ಪ್ರತಿಕ್ರಿಯಿಸುವುದು ಬೇಡ’ ಎಂದ ಬುದ್ಧ.

ಅದೇ ಅತೀ ದೊಡ್ಡ ಅಸ್ತ್ರ!: ಬುದ್ಧನ ಮೇಲೆ ಒಂದು ಕಲ್ಲನ್ನು ಎಸೆದಾಗ ಜನರು ಪ್ರತಿಕ್ರಿಯಿಸಿದರು. ಆದರೆ ಬುದ್ಧ ಪ್ರತಿಕ್ರಿಯಿಸಬೇಡಿ ಎಂದು ಹೇಳಿ, ನಂತರ ಸುಮ್ಮನೆ ಮುಗುಳ್ನಕ್ಕ. ಇದು ಕ್ರಿಯೆ. ನಿಮ್ಮ ವಿರುದ್ಧವಾದವರಿದ್ದರೆ, ಅವರಿಗೆ ನೀವು ಪ್ರೇಮ ಮತ್ತು ಕರುಣೆಯನ್ನು ತೋರಿದರೆ ಮತ್ತು ನಿಮ್ಮ ಮತ್ತೊಂದು ಕೆನ್ನೆಯನ್ನು ತೋರಿಸಿದರೆ, ಅವರು ಮತ್ತೆ ನಿಮ್ಮನ್ನು ಹೊಡೆಯಲಾರರು.

ಅದೇ ಅತೀ ದೊಡ್ಡ ಅಸ್ತ್ರ! ಅಹಿಂಸೆಯ ತತ್ವವೂ ಒಂದು ಕ್ರಿಯೆಯೇ. ಅದು ಅತಿ ಬುದ್ಧಿವಂತವಾದ, ಪ್ರಜ್ಞಾವಂತವಾದ ಕ್ರಿಯೆ, ಕೇವಲ ಪ್ರತಿಕ್ರಿಯೆಯಲ್ಲ. ನಕ್ಸಲರಿಗೆ, ಹೋರಾಟಗಾರರಿಗೆ ನಾವು ಹೇಳುವ ಮಾತೆಂದರೆ, ನಿಮ್ಮ ಜನರ ಸಮೃದ್ಧಿ ಬೇಕು ನಿಮಗೆ. ಅದು ಹಿಂಸೆಯ ಮೂಲಕ ಬರಲು ಸಾಧ್ಯವಿಲ್ಲ. ಎಷ್ಟೋ ವರ್ಷಗಳಿಂದ ಹಿಂಸೆಯನ್ನು ಪಾಲಿಸಿಕೊಂಡು ಬರುತ್ತಿದ್ದೀರಿ. ರೈಲ್ವೆ

ನಿಲ್ದಾಣಗಳಲ್ಲಿ ಬಾಂಬುಗಳನ್ನು ಇಡುತ್ತೀರಿ, ಜಲಸಂಪನ್ಮೂಲಗಳನ್ನು ನಾಶ ಮಾಡಿದ್ದೀರಿ, ಟೆಲಿಪೋನ್ ಟವರ್​ಗಳನ್ನು ನಾಶಮಾಡಿದ್ದಿರಿ. ಇದರಿಂದ ನಿಮಗೆ ಇನ್ನಷ್ಟು ದುಃಖ ಬಂದಿತಷ್ಟೆ. ಅಹಿಂಸೆಯೇ ನಿಮ್ಮ ತತ್ವವಾದಲ್ಲಿ ಇಡೀ ಜಗತ್ತು ನಿಮ್ಮೊಂದಿಗಿದೆ. ಅಹಿಂಸೆಯ ತತ್ವವನ್ನು ಅನುಸರಿಸಿ, ಜೀವನದ ಮುಖ್ಯವಾಹಿನಿಗೆ ಬಂದು ಸೇರಿದ ಅನೇಕ ಭಯೋತ್ಪಾದಕರಿದ್ದಾರೆ, ನಕ್ಸಲೈಟ್​ರಿದ್ದಾರೆ. ಆದ್ದರಿಂದಲೇ ಕೃಷ್ಣನು, ಕರ್ಮದ ಗತಿಯು ಅತೀ ಗಹನವಾದದ್ದು ಎಂದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net