ತುಮಕೂರು: ಶಿಥಿಲ ಕೊಠಡಿ ನೆಲಸಮ ಮಾಡಿ

3
Published on

ಜಿಪಂ ಸಿಇಒ ಪ್ರಭು ಖಡಕ್​ ಸೂಚನೆ | 479 ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ

ವಿಜಯವಾಣಿ ಸುದ್ದಿಜಾಲ ತುಮಕೂರು
ಜಿಲ್ಲೆಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕೊಠಡಿ, ಶೌಚಗೃಹಗಳನ್ನು ಕೂಡಲೇ ನೆಲಸಮ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಖಡಕ್​ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ವಿಡಿಯೋ ಕಾನ್ಫರೆನ್ಸ್​ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿ ಮಾತನಾಡಿದ ಸಿಇಒ, ಮಕ್ಕಳಿಗೆ ಪಾಠ ಮಾಡಲು ಯೋಗ್ಯವಿಲ್ಲದ, ದುಸ್ಥಿತಿಯಲ್ಲಿರುವ ಕೊಠಡಿಗಳನ್ನು ನೆಲಸಮ ಮಾಡಲು ಜಿಲ್ಲಾ ಪಂಚಾಯಿತಿ ಅನುಮೋದನೆ ಪಡೆದ ನಂತರ ಕ್ರಮವಹಿಸಲು ನಿರ್ದೇಶನ ನೀಡಿದರು.
ಮಳೆಗಾಲ ಇರುವುದರಿಂದ ಸಂಬಂಧಿಸಿದ ಗ್ರಾಪಂಗಳು ತಮ್ಮ ವ್ಯಾಪ್ತಿಯಲ್ಲಿ ದುರಸ್ತಿಪಡಿಸಲಾಗದ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯ ವಿಳಂಬ ಮಾಡದೆ ಬರುವ ಸೆಪ್ಟೆಂಬರ್​ನಲ್ಲಿ ಪೂರ್ಣಗೊಳಿಸಬೇಕು. ನೆಲಸಮ ಗೊಳಿಸುವ ಮುನ್ನ ಶಿಥಿಲ ಕೊಠಡಿಗಳ ಸ್ಥಿತಿ-ಗತಿಯ ಪೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ತಾಕೀತು ಮಾಡಿದರು. ಸಭೆಯಲ್ಲಿ ತುಮಕೂರು ಡಿಡಿಪಿಐ ಮನಮೋಹನ್​, ಮಧುಗಿರಿ ಡಿಡಿಪಿಐ ಗಂಗಾಧರ್​, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಸಣ್ಣ ಮಸಿಯಪ್ಪ, ಪಂಚಾಯತ್​ ರಾಜ್​ ಇಂಜಿನಿಯರಿಂಗ್​ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್​ ಬಿ.ತಿಮ್ಮರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕಾಮಗಾರಿ ಪೂರ್ಣಗೊಳಿಸಿ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಲ್ಲಿ ಸುವ್ಯವಸ್ಥೆಯ ಕೊಠಡಿ ಹಾಗೂ ಶೌಚಗೃಹ, ಶಾಲಾ ಆವರಣ ಗೋಡೆ, ಆಟದ ಮೈದಾನ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಅವಶ್ಯವಿರುವ ಕಡೆ ಹೊಸ ಶಾಲಾ ಕೊಠಡಿ ನಿಮಾರ್ಣ ಮಾಡಲು ಡಿಡಿಪಿಐಗಳು ಅಗತ್ಯ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ವಿವೇಕ ಯೋಜನೆಯಡಿ ಮಂಜೂರಾಗಿರುವ 360 ಶಾಲಾ ಕೊಠಡಿಗಳ ನಿಮಾರ್ಣ ಕಾಮಗಾರಿಯನ್ನು ಮುಂಬರುವ ಜನವರಿಯೊಳಗೆ ಪೂರ್ಣಗೊಳಿಸಬೇಕು. ರ್ನಿಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿ.ಪ್ರಭು ಎಚ್ಚರಿಕೆ ನೀಡಿದರು.

953 ಶಾಲಾ ರೂಂ ದುರಸ್ತಿ: 2024-&25ನೇ ಸಾಲಿನಲ್ಲಿ ವಿವೇಕ ಯೋಜನೆಯಡಿ ಜಿಲ್ಲೆಯ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ 54.62 ಕೋಟಿ ರೂ. ವೆಚ್ಚದಲ್ಲಿ ಒಟ್ಟು 479 ಹೊಸ ಕೊಠಡಿ ನಿಮಾರ್ಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 953 ಶಾಲಾ ಕೊಠಡಿಗಳ ದುರಸ್ತಿಗಾಗಿ 19.06 ಕೋ.ರೂ.,ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತುಮಕೂರು ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಮನಮೋಹನ್​ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 1161 ಶಾಲೆಗಳಲ್ಲಿ ಆವರಣ ಗೋಡೆ ನಿಮಾರ್ಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ 874 ಶೌಚಗೃಹ, 945 ಆಟದ ಮೈದಾನಗಳ ಅವಶ್ಯವಿದೆ. ಶಿಥಿಲಾವಸ್ಥೆಯಲ್ಲಿರುವ 1087 ಕೊಠಡಿಗಳನ್ನು ನೆಲಸಮಗೊಳಿಸಲು ಗುರುತಿಸಲಾಗಿದೆ. ಅಲ್ಲದೆ, 2657 ಪ್ರಾಥಮಿಕ ಹಾಗೂ 196 ಪ್ರೌಢಶಾಲೆಗಳ ಆಸ್ತಿ ನೋಂದಣಿಯಾಗಿದ್ದು, ಉಳಿದಂತೆ 582 ಪ್ರಾಥಮಿಕ ಹಾಗೂ 31 ಪ್ರೌಢಶಾಲೆಗಳ ಆಸ್ತಿಗಳನ್ನು ನೋಂದಣಿ ಮಾಡಬೇಕಾಗಿದೆ ಎಂದು ಮಾಹಿತಿ ನೀಡಿದರು.

ಎಸ್ಸೆಸ್ಸೆಲ್ಸಿ ಲಿತಾಂಶ ಸುಧಾರಣೆಗೆ ಒತ್ತು: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮವಹಿಸಲು ಶಿಕ್ಷಕರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಪಠ್ಯ ಬೋಧನಾ ಕ್ರಮ, ಮಕ್ಕಳ ಕಲಿಕೆಗೆ ಉತ್ತೇಜನ, ವಿದ್ಯಾರ್ಥಿಗಳಲ್ಲಿ ಕೌಶಲ ಹಾಗೂ ಸೃಜನಶೀಲತೆ ಹೆಚ್ಚಿಸಲು ಅಳವಡಿಸಿಕೊಳ್ಳಬೇಕಾದ ವಿಧಾನಗಳ ಬಗ್ಗೆ ಶಿಕ್ಷಕರಿಗೆ ವಸತಿ ತರಬೇತಿ ನೀಡಲು ಎಲ್ಲ ಸಿದ್ಧತೆ ಕೈಗೊಳ್ಳುವಂತೆ ಜಿಪಂ ಸಿಇಒ ಜಿ.ಪ್ರಭು ತಾಕೀತು ಮಾಡಿದರು. ಕಳಪೆ ಮಟ್ಟದಲ್ಲಿರುವ ಅನುದಾನಿತ ಶಾಲೆಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳಬೇಕು. ಕರ್ತವ್ಯದ ರ್ನಿಲಕ್ಷ್ಯತೋರುವ ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನು ಮುಲಾಜಿಲ್ಲದೆ ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net