ಮಾರುಕಟ್ಟೆಯ ಬಿರುಗಾಳಿಯಲ್ಲೂ ಸುರಕ್ಷಿತ ರಿಟರ್ನ್ಸ್! ಸ್ಮಾರ್ಟ್ ಹೂಡಿಕೆಗೆ ಇಲ್ಲಿದೆ ಹೊಸ ದಾರಿ | Flexicap Fund

ರಕ್ಷಾ ಎಂಎಸ್, ಮ್ಯೂಚುವಲ್ ಫಂಡ್ ವಿತರಕರು
ರಕ್ಷಾ ಎಂಎಸ್, ಮ್ಯೂಚುವಲ್ ಫಂಡ್ ವಿತರಕರು
Published on
Flexicap Fund: ಫ್ಲೆಕ್ಸಿಕ್ಯಾಪ್ ಫಂಡ್ ಒಂದು ನಿರ್ದಿಷ್ಟ ನಿಬಂಧನೆಗಳಿಲ್ಲದ ಒಂದು ಈಕ್ವಿಟಿ ಮ್ಯೂಚುವಲ್ ಫಂಡ್. ಮಲ್ಟಿಕ್ಯಾಪ್ ಫಂಡ್‌ಗಳಂತೆಯೇ ಇದರಲ್ಲಿಯೂ ಇಷ್ಟೇ ಭಾಗವನ್ನು ಲಾರ್ಜ್‌, ಮಿಡ್‌ ಅಥವಾ ಸ್ಮಾಲ್‌ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕೆಂಬ ಕಡ್ಡಾಯ ನಿಯಮಗಳು ಇರುವುದಿಲ್ಲ. ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಫಂಡ್ ಮ್ಯಾನೇಜರ್ ಕಂಪ್ಲೀಟ್​ ಮಾರುಕಟ್ಟೆಯಲ್ಲಿ ಎಲ್ಲಿ ಬೇಕಾದರೂ ಅನುಕೂಲಕ್ಕೆ ತಕ್ಕಂತೆ ಹೂಡಿಕೆಯನ್ನು ಬದಲಾಯಿಸುವ ಸ್ವಾತಂತ್ರ್ಯ ಹೊಂದಿರುತ್ತಾರೆ.

ಈ ಫಂಡ್ ಕೆಲಸ ಹೇಗೆ?

ಮಾರುಕಟ್ಟೆ ಏರಿಳಿತಕ್ಕೆ ತಕ್ಕಂತೆ ಬದಲಾವಣೆ ಆಗುತ್ತದೆ. ಷೇರುಪೇಟೆಯಲ್ಲಿ ಏರಿಳಿತಗಳು ಹೆಚ್ಚಾದಾಗ ಅಥವಾ ರಿಸ್ಕ್ ಹೆಚ್ಚಿದ್ದಾಗ, ಫಂಡ್ ಮ್ಯಾನೇಜರ್ ಸುರಕ್ಷತೆಗಾಗಿ 'ಲಾರ್ಜ್ ಕ್ಯಾಪ್' (ದೊಡ್ಡ ಕಂಪನಿಗಳ) ಶೇರುಗಳಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುತ್ತಾರೆ. ಅದೇ ಆರ್ಥಿಕತೆ ಚೇತರಿಸಿಕೊಳ್ಳುವ ಸೂಚನೆ ಸಿಕ್ಕಾಗ ಹಾಗೂ ಸಣ್ಣ (ಸ್ಮಾಲ್‌ಕ್ಯಾಪ್) ಮತ್ತು ಮಧ್ಯಮ (ಮಿಡ್‌ಕ್ಯಾಪ್) ಕಂಪನಿಗಳ ಶೇರುಗಳು ಅಗ್ಗದ ಬೆಲೆಗೆ ಲಭಿಸುವಾಗ, ಹೆಚ್ಚು ಲಾಭ ಗಳಿಸಲು ಆ ಕಂಪನಿಗಳತ್ತ ಗಮನ ಹರಿಸುತ್ತಾರೆ. ಫಂಡ್ ಮ್ಯಾನೇಜರ್‌ಗಳು ದೇಶದ ಆರ್ಥಿಕ ಸೂಚ್ಯಂಕಗಳು ಮತ್ತು ಪ್ರತ್ಯೇಕ ಕಂಪನಿಗಳ ಮೌಲ್ಯ/ಗುಣಮಟ್ಟವನ್ನು ಪರಿಶೀಲಿಸಿ ಹೂಡಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಬದಲಾವಣೆಗೆ ಒಗ್ಗಿಕೊಳ್ಳುವ ಗುಣ (Adaptability)

ಸಮುದ್ರದಲ್ಲಿ ಗಾಳಿಯ ದಿಕ್ಕಿಗೆ ತಕ್ಕಂತೆ ದೋಣಿಯ ಪಯಣವನ್ನು ಕಂಟ್ರೋಲ್​ ಮಾಡುವ ನಾವಿಕನಂತೆ, ಫ್ಲೆಕ್ಸಿಕ್ಯಾಪ್ ಫಂಡ್ ಮ್ಯಾನೇಜರ್ ಮಾರುಕಟ್ಟೆಯಲ್ಲಿ ಬಿರುಗಾಳಿ ಎದ್ದಾಗ ಸುರಕ್ಷಿತ ಹೂಡಿಕೆಯತ್ತ, ಮಾರುಕಟ್ಟೆ ಉತ್ತಮವಾಗಿದ್ದಾಗ ಲಾಭದಾಯಕ ಕಂಪನಿಗಳತ್ತ ತಮ್ಮ ಹೂಡಿಕೆಯನ್ನು ಬದಲಾಯಿಸುವುದು ಇಲ್ಲಿ ಗಮನಾರ್ಹ.

ರಿಸ್ಕ್ ಏನು?

ಈ ಫಂಡ್‌ಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯವಿ ಇರುವುದರಿಂದ, ಇದರ ಯಶಸ್ಸು ಸಂಪೂರ್ಣವಾಗಿ ಫಂಡ್ ಮ್ಯಾನೇಜರ್‌ನ ನಿರ್ಧಾರ ಮತ್ತು ಬುದ್ಧಿವಂತಿಕೆಯ ಮೇಲೆಯೇ ನಿಂತಿರುತ್ತದೆ. ಮ್ಯಾನೇಜರ್ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾದರೆ ಲಾಭದ ಹೊಳೆ ಹರಿಯುತ್ತದೆ. ಅದೇ, ಒಂದು ವೇಳೆ ಅಂದಾಜು ತಪ್ಪಿದರೆ ಹೂಡಿಕೆದಾರರಿಗೆ ನಷ್ಟವಾಗುವ ಸಾಧ್ಯತೆಯೂ ಇರುತ್ತದೆ. ಬದಲಾಗುವ ಮಾರುಕಟ್ಟೆ ಪರಿಸ್ಥಿತಿಗೆ ತಕ್ಕಂತೆ ಹೂಡಿಕೆ ಹಂಚಿಕೆ ಮಾಡುವ ಐಸಿಐಸಿಐ ಪ್ರುಡೆನ್ಶಿಯಲ್ ಫ್ಲೆಕ್ಸಿಕ್ಯಾಪ್ ಫಂಡ್ ಕೂಡ ಇದಕ್ಕೊಂದು ಉತ್ತಮ ಉದಾಹರಣೆ ಎಂದೇ ಹೇಳಬಹುದು.

ಸರಾಸರಿ ವಾರ್ಷಿಕ ರಿಟರ್ನ್ಸ್ (CAGR - ಜೂನ್ 30, 2026)

1 ವರ್ಷದ ರಿಟರ್ನ್: ಶೇ.5.09 ರಷ್ಟು
3 ವರ್ಷಗಳ ರಿಟರ್ನ್: ಶೇ.15.39 ರಷ್ಟು
ಪ್ರಾರಂಭವಾದಾಗಿನಿಂದ (Since Inception): ಶೇ.14.55 ರಷ್ಟು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net