ಪತ್ರ ವ್ಯವಹಾರ ಕನ್ನಡದಲ್ಲೇ ಇರಲಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸೂಚನೆ

Rakesh kumar DC RMG 2
Published on

ರಾಮನಗರ : ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳು ಕಚೇರಿ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಪ್ರತಿ ತಿಂಗಳು 3ನೇ ತಾರೀಕಿನೊಳಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾಸಿಕ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಾಂಗ ಇಲಾಖೆ ಹೊರತುಪಡಿಸಿ ಜಿಲ್ಲಾ ಮಟ್ಟದ ಕಚೇರಿಗಳು ಸರ್ಕಾರದ ಎಲ್ಲ ಪತ್ರ ವ್ಯವಹಾರವನ್ನು ಕನ್ನಡದಲ್ಲೇ ಮಾಡುವುದು. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಇಲಾಖೆಗಳು ನೇರವಾಗಿ ಪತ್ರ ವ್ಯವಹಾರ ನಡೆಸುವುದಿಲ್ಲ. ಆದ್ದರಿಂದ ಆಂಗ್ಲ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುವ ಸನ್ನಿವೇಶ ಬರುವುದಿಲ್ಲ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಮಾತನಾಡಿ, ಜಿಲ್ಲಾ ಕಚೇರಿಗಳ ಜಾಲತಾಣಗಳಾದ ಫೇಸ್‌ಬುಕ್, ಟ್ವೀಟರ್ ಇತ್ಯಾದಿಗಳಲ್ಲಿ ಇಲಾಖೆಯ ಯೋಜನೆಗಳ ವಿವಿಧ ಮಾಹಿತಿಗಳ ಪುಟಗಳನ್ನು ಕನ್ನಡದಲ್ಲಿ ನಿರ್ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ವೀಣಾ, ಕೆ.ಕಾಳಯ್ಯ, ಎಂ. ಭೈರೇಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಾಮಲಕ ಅಳವಡಿಸಿ :  ಜಿಲ್ಲೆಯಲ್ಲಿರುವ ಹೋಟೆಲ್, ಹೋಂ ಸ್ಟೇ, ರೆಸಾರ್ಟ್‌ಗಳು ಕನ್ನಡದಲ್ಲೂ ನಾಮಫಲಕ ಅಳವಡಿಸಬೇಕು. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇದನ್ನು ಪರಿಶೀಲಿಸಬೇಕು, ಕನ್ನಡದಲ್ಲಿ ನಾಮಫಲಕ ಅಳವಡಿಸದಿದ್ದಲ್ಲಿ ಪರವಾನಗಿ ರದ್ದು ಮಾಡಲು ಶಿಫಾರಸು ಮಾಡುವಂತೆ ರಾಕೇಶ್ ಕುಮಾರ್ ಸೂಚಿಸಿದರು.

ಸರ್ಕಾರಿ ಶಾಲೆಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ಶಾಲೆಯನ್ನು ತೆರೆಯದಂತೆ ನಿಯಮವಿರುತ್ತದೆ. ಇನ್ನುಮುಂದೆ ಇದು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಈ ನಿಯಮ ಪರಿಶೀಲಿಸಿಯೇ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net