ಡಿಪಿಸಿ ಸಭೆ ನಡೆಸುವಂತೆ ಸಿಎಂಗೆ ಪತ್ರ

B R Patil
Published on

ಬೆಂಗಳೂರು: ಜಿಲ್ಲಾ ಯೋಜನಾ ಸಮಿತಿಗಳು (ಡಿಪಿಸಿ) ಅಕ್ಟೋಬರ್ ಒಳಗಾಗಿ ಸಭೆ ನಡೆಸಿ ವರದಿ ನೀಡದೆ ಇದ್ದರೇ ಪರ್ಯಾಯ ಮಾರ್ಗ ತಿಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಪತ್ರ ಬರೆದಿದೆ.

ಬಹುಮಹಡಿ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ಸಂವಿಧಾನಿಕವಾಗಿ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ ಯೋಜನೆಗಳನ್ನು ಒಳಗೊಂಡು ಅಭಿವೃದ್ಧಿ ಯೋಜನೆಯ ಕರಡನ್ನು ತಯಾರಿಸಲು ಪ್ರತಿಯೊಂದು ಜಿಲ್ಲೆಗೂ ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸಬೇಕಿದೆ. ಈ ಸಮಿತಿಗಳು ಶಿಾರಸು ಮಾಡುವ ಯೋಜನೆಗಳನ್ನು ರಾಜ್ಯ ಬಜೆಟ್‌ನಲ್ಲಿ ಅಳವಡಿಸಿ ಅನುಷ್ಠಾನ ಮಾಡಬೇಕೆಂಬುದು ಆಶಯವಾಗಿದೆ.

ಆದರೆ, ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆದಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಯೋಜನಾ ಸಮಿತಿಗಳ ಸಭೆಯನ್ನೇ ನಡೆಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ಸ್ಥಳೀಯ ಶಾಸಕರ ಸಮ್ಮುಖದಲ್ಲಿ ತಾಲೂಕು ಸಭೆ ನಡೆಸಿ ಅಭಿವೃದ್ಧಿ ಯೋಜನಾ ವರದಿ ಸಿದ್ಧಪಡಿಸಬೇಕೆಂದು ಸೂಚನೆ ನೀಡಲಾಗಿತ್ತು. ಅದಕ್ಕೆ ಮಾರ್ಗಸೂಚಿಗಳನ್ನು ನೀಡಲಾಗಿತ್ತು.

ಆದರೂ ಈವರೆಗೂ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿಗಳಿಂದ ಯಾವುದೇ ಸಭೆಗಳು ನಡೆದಿಲ್ಲ. ಕ್ರೋಢೀಕೃತ ಯೋಜನೆಯ ತಯಾರಿ ಬಗ್ಗೆ ಪ್ರಸ್ತಾವನೆ/ಸಭಾ ನಡವಳಿಗಳು ಸಲ್ಲಿಕೆ ಆಗಿರುವುದಿಲ್ಲ. ಆದರಿಂದ ಅಕ್ಟೋಬರ್ ಒಳಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿ ಸಭೆಗಳನ್ನು ನಡೆಸಿ ಯೋಜನೆಗಳನ್ನು ಸಿದ್ದಪಡಿಸಬೇಕು. ಬಳಿಕ ನವೆಂಬರ್ ಒಳಗಾಗಿ ಸಲ್ಲಿಸುವಂತೆ ಕ್ರಮ ವಹಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡುವಂತೆ ಆಯೋಗದ ಅಧ್ಯಕ್ಷರೂ ಆಗಿರುವ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ. ಒಂದು ವೇಳೆ ವರದಿ ಸಿದ್ದವಾಗದೆ ಇದ್ದರೇ ಅದಕ್ಕೆ ಪರ್ಯಾಯ ಮಾರ್ಗವನ್ನು ತಿಳಿಸಬೇಕೆಂದು ಮುಖ್ಯಮಂತ್ರಿ ಅವರ ಬಳಿ ಸಲಹೆ ಕೋರಲಾಗಿದೆ ಎಂದು ಬಿ.ಆರ್. ಪಾಟೀಲ್ ತಿಳಿಸಿದ್ದಾರೆ. ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಮತ್ತಿತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net