ಸರ್ಕಾರದ ಜತೆ ಕೈಜೋಡಿಸೋಣ

HUN-JUNE-11-8(MEDICAL SHOPS MEETING) (1)
Published on

ಹುಣಸೂರು: ಸರ್ಕಾರದ ಸೂಚನೆಯಂತೆ ಮಹಾಮಾರಿ ಕರೊನಾ ಸೋಂಕು ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಎಲ್ಲರೂ ಸಹಕರಿಸಬೇಕೆಂದು ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿ.ಎಸ್.ಕೃಷ್ಣ ಕೋರಿದರು.

ಪಟ್ಟಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಔಷಧ ನಿಯಂತ್ರಕರ ಕಚೇರಿಯಿಂದ ಈ ಕುರಿತು ಹಲವಾರು ನಿರ್ದೇಶನಗಳನ್ನು ಪಡೆದಿದ್ದೇವೆ ಎಂದರು.

ಪ್ರಮುಖವಾಗಿ ಒಟಿಸಿ(ಓವರ್ ದ ಕೌಂಟರ್) ವಹಿವಾಟಿನ ವೇಳೆ ಗ್ರಾಹಕರು ಜ್ವರ, ಕೆಮ್ಮು ಮತ್ತು ನೆಗಡಿಯಂತಹ ಕಾಯಿಲೆಗಳಿಗೆ ನೇರವಾಗಿ ಮೆಡಿಕಲ್ ಶಾಪ್‌ಗಳಿಗೆ ಬಂದು ಔಷಧ ಕೋರಿದರೆ, ಅವರ ಮನವೊಲಿಸಿ ವೈದ್ಯರ ಬಳಿ ತೆರಳಲು ಅಥವಾ ಫೀವರ್ ಕ್ಲಿನಿಕ್‌ಗೆ ತೆರಳಿ ತಪಾಸಣೆಗೊಳಪಡಲು ಸೂಚಿಸುವುದು ಅಗತ್ಯ ಎಂದು ತಿಳಿಸಿದರು.

ವೈದ್ಯರ ನಿರ್ದೇಶನದಂತೆ ಚೀಟಿಯೊಂದಿಗೆ ಮೇಲ್ಕಂಡ ಕಾಯಿಲೆಗಳಿಗೆ ಔಷಧ ಪಡೆಯಲು ಬರುವ ಗ್ರಾಹಕರ ಹೆಸರು, ವಿಳಾಸವನ್ನು ಪಡೆದು ಔಷಧ ನಿಯಂತ್ರಕರ ಕಚೇರಿ ಸ್ಥಾಪಿಸಿರುವ ಆ್ಯಪ್ ಮೂಲಕ ಆನ್‌ಲೈನ್ ವ್ಯವಸ್ಥೆಯೊಂದಿಗೆ ಪ್ರತಿದಿನ ಮಾಹಿತಿ ರವಾನಿಸಬೇಕು. ಸಮಾಜದಿಂದ ಸಾಕಷ್ಟು ಸವಲತ್ತುಗಳನ್ನು ಪಡೆದಿರುವ ನಾವು ಸಮಾಜಕ್ಕೆ ಇಂತಹ ಸಂದರ್ಭದಲ್ಲಿ ನಮ್ಮಿಂದಾಗುವ ಸಹಕಾರ ನೀಡೋಣ. ಕರೊನಾ ತೊಲಗಿಸಲು ಇಲಾಖೆಯೊಂದಿಗೆ ಕೈಜೋಡಿಸೋಣ ಎಂದರು.

ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ಮಾತನಾಡಿ, ತಾಲೂಕಿನಲ್ಲಿರುವ 28 ಮೆಡಿಕಲ್ ಶಾಪ್‌ಗಳ ಪೈಕಿ 25 ಶಾಪ್‌ನವರು ಈಗಾಗಲೇ ಆನ್‌ಲೈನ್‌ನಲ್ಲಿ ಮಾಹಿತಿ ರವಾನಿಸುತ್ತಿದ್ದು, ಮಿಕ್ಕವರ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಮಾಹಿತಿ ರವಾನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net