ಸಂವಿಧಾನದ ಆಶಯದಂತೆ ನಡೆಯೋಣ

skp rp
ಶಿಕಾರಿಪುರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾದಕ ಕೃಷಿಕರನ್ನು ಶಾಸಕ ಬಿ.ವೈ.ವಿಜಯೇಂದ್ರ ಗೌರವಿಸಿದರು. ಶೈಲಾ ಮಡ್ಡಿ, ಕೆ.ಎಸ್.ಗುರುಮೂರ್ತಿ, ಭರತ್ ಇತರರಿದ್ದರು.
Published on

ಶಿಕಾರಿಪುರ: ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ. ಅಭಿವೃದ್ಧಿ ಹೊಂದಿದ ಮಾದರಿ ತಾಲೂಕುಗಳಲ್ಲಿ ಶಿಕಾರಿಪುರ ಮುಂಚೂಣಿಯಲ್ಲಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನ ವಿಶ್ವಶ್ರೇಷ್ಠ. ಜಗತ್ತಿನ ಹಲವು ದೇಶಗಳು ನಮ್ಮ ಸಂವಿಧಾನವನ್ನು ಮಾದರಿಯನ್ನಾಗಿ ಇಟ್ಟುಕೊಂಡಿವೆ. ಸಂವಿಧಾನದ ಆಶಯಗಳಿಗೆ ತಕ್ಕಂತೆ ನಾವು ನಡೆದುಕೊಳ್ಳಬೇಕು ಎಂದರು.

ಭಾರತ ಕೃಷಿ ಪ್ರಧಾನ ದೇಶ. ರೈತರು ದೇಸಿ ಕೃಷಿ ಪದ್ಧತಿ ಜತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಬದಲಾವಣೆ ತರುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿಯಿಂದ ಯಾವುದೇ ರೋಗ ರುಜಿನಗಳಿಂದ ದೂರವಾಗಬಹುದು. ಶುದ್ಧವಾದ ಬೆಳೆ ಮತ್ತು ಪರಿಶುದ್ಧ ಆಹಾರ ನಮಗೆ ದೊರೆಯುತ್ತದೆ ಎಂದರು.

ಗಣರಾಜ್ಯೋತ್ಸವ ದಿನದಂದು ತಾಲೂಕಿನ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲು ಸಂತಸವಾಗುತ್ತಿದೆ. ರೈತ ಮತ್ತು ಸೈನಿಕ ಎರಡು ಕಂಗಳಿದ್ದಂತೆ. ಹಿಂದಿನ ವರ್ಷಗಳಲ್ಲಿ ಬರಗಾಲ ಮತ್ತು ಅಕಾಲಿಕ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಯಾವುದೇ ಸರ್ಕಾರವಿರಲಿ ಮೊದಲು ರೈತರಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಭರತ್, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್, ಕೃಷಿ ಸಹಾಯಕ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ, ಪಾಲಾಕ್ಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net