ಉತ್ತಮ ಆಡಳಿತ ನೀಡುವತ್ತ ಗಮನಹರಿಸಲಿ

lalitamma
ಎನ್. ಲಲಿತಮ್ಮ
Published on

ಸಾಗರ: ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಸದಸ್ಯರಿಗೆ ಇಲ್ಲ. ಅವರು ನಗರಸಭೆಯಲ್ಲಿ ಗೂಂಡಾಗಿರಿ ಮಾಡುವ ಮೂಲಕ ಅಧಿಕಾರ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಗರಸಭಾ ಸದಸ್ಯೆ ಎನ್.ಲಲಿತಮ್ಮ ಆರೋಪಿಸಿದರು.

ಸ್ಥಾಯಿ ಸಮಿತಿ ಆಯ್ಕೆ ಸಂದರ್ಭ ಬಿಜೆಪಿ ಪಟ್ಟಿ ಮಾಡಿದ 11 ಸದಸ್ಯರ ಘೋಷಿಸಿದ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಕಾಂಗ್ರೆಸ್ ನೀಡಿದ ಪಟ್ಟಿ ಬಗ್ಗೆ ಗಮನ ಹರಿಸಿಲ್ಲ. 1964ರ ಮುನ್ಸಿಪಲ್ ಆ್ಯಕ್ಟ್ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ನಗರಸಭೆ ಅಧ್ಯಕ್ಷರು ಸೌಜನ್ಯಕ್ಕೂ ಶಾಸಕರನ್ನು ಭೇಟಿ ಮಾಡಿಲ್ಲ. ಸ್ಥಳೀಯ ಆಡಳಿತಕ್ಕೆ ಸಹಕಾರ ಕೊಡಲು ಶಾಸಕರು ಬಂದಿದ್ದು ತಪ್ಪು ಎನ್ನುವಂತೆ ಹೇಳುತ್ತಿರುವುದು ಸರಿಯಲ್ಲ. ಬಿಜೆಪಿ ಸದಸ್ಯರಿಗೆ ಒಳ್ಳೆಯ ಆಡಳಿತ ನೀಡುವ ಉದ್ದೇಶ ಇದ್ದಂತಿಲ್ಲ. ಆಡಳಿತಕ್ಕೆ ನನ್ನ ಬೆಂಬಲ ಇದೆ ಎಂದು ಶಾಸಕರು ತಿಳಿಸಿದರೂ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯೆ ಮಧುಮಾಲತಿ ಮಾತನಾಡಿ, ಶಾಸಕರು ಮತ್ತು ಕಾಂಗ್ರೆಸಿಗರಿಗೆ ಮಹಿಳೆಯರು ಅಧಿಕಾರ ನಡೆಸುತ್ತಿರುವ ಬಗ್ಗೆ ಯಾವುದೇ ಬೇಸರ ಇಲ್ಲ. ಶಾಸಕರು ನಗರಸಭೆ ಅಧ್ಯಕ್ಷರಾಗಿ ಮೈತ್ರಿ ಪಾಟೀಲ್ ಆಯ್ಕೆಯಾದ ತಕ್ಷಣ ನಗರಸಭೆಯಲ್ಲೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಾಮ ನಿರ್ದೇಶಿತ ಸದಸ್ಯ ರವಿಕುಮಾರ್ ಮಾತನಾಡಿ, ಶಾಸಕರು ನಗರ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ತಂದಿದ್ದು, ಕ್ರಿಯಾಯೋಜನೆ ಮಂಜೂರಾತಿಗೆ ಸಭೆ ಕರೆಯುವುದನ್ನು ಬಿಟ್ಟು, ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಸಭೆ ಕರೆದಿರುವುದು ಬಿಜೆಪಿಯ ಅಧಿಕಾರದ ಹಪಾಹಪಿತನಕ್ಕೆ ಸಾಕ್ಷಿ ಎಂದರು.

ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ನಾಗರತ್ನ, ನಾದಿರಾ ಪರ್ವಿನ್, ಸಬೀನಾ ಪರ್ವಿನ್, ಶಬಾನ ಬಾನು, ಎಲ್.ಚಂದ್ರಪ್ಪ, ಸರಸ್ವತಿ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಡಿ.ದಿನೇಶ್, ಹಮೀದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net