

ಬೆಂಗಳೂರು: ಅಹಿಂದ, ಜಾತಿ ಗಣತಿ ಜಪ ಮಾಡುವ ನೀವು ಅಹಿಂದಕ್ಕೆ ಏನು ಮಾಡಿದ್ದೀರಿ? ವಾಲ್ಮೀಕಿ ನಿಗಮದಲ್ಲಿ ಲೂಟಿ ಹೊಡೆದಿರುವುದು ಗೊತ್ತಿಲ್ಲವೇ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಜೆ.ಪಿ.ಭವನದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರ ಅವಧಿಯಲ್ಲಿ ಏನು ಕೆಲಸವಾಗಿದೆ? ಚರ್ಚೆಗೆ ಬರಲಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿ ನಾನು ಹಾಗೂ ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯ 15 ತಿಂಗಳಲ್ಲಿ ಏನು ಮಾಡಿದ್ದಾರೆ ಎಂಬ ಬಗ್ಗೆ ಮುಕ್ತ ಚರ್ಚೆ ಮಾಡಲು ಸಿದ್ಧ ಎಂದು ಸವಾಲು ಹಾಕಿದರು.
ಆಗ ನಮ್ಮ ಪಕ್ಷದ 38 ಶಾಸಕರು ಆಗಿದ್ದರು. ಕಾಂಗ್ರೆಸ್ ಪೂರ್ಣ ಸಹಕಾರ ನೀಡದಿದ್ದರೂ ಉತ್ತಮ ಆಡಳಿತ ಕೊಟ್ಟಿದ್ದೇನೆ. ಪೂರ್ಣ ಬಹುಮತವಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂಬುದರ ಚರ್ಚೆಯಾಗಲಿ ಎಂದರು.
ಕೊಟ್ಟ ಕುದುರೆ ಏರಲರಿಯದವರು ಎಂದು ನನ್ನನ್ನು ಹಂಗಿಸುತ್ತಾರೆ. ನನಗೆ ಯಾವ ಕುದುರೆ ಕೊಟ್ಟಿದ್ದರು? ಎಂದು ಪ್ರಶ್ನಿಸಿದರು. ಮಾತು ಮಾತಿಗೆ ಹೊಟ್ಟೆ ಉರಿ ಎಂದು ಹೇಳುತ್ತಾರೆ. ಗೌರವಯುತವಾಗಿ ಮನೆಯಲ್ಲಿದ್ದ ಮಡದಿ ಅವರನ್ನು ಹೊರಗೆ ತರುವ ಕೆಲಸ ಮಾಡಿದವರು ವಿರೋಧ ಪಕ್ಷದವರಲ್ಲ ನೀವು ಎಂದು ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟರು.
ಇಷ್ಟು ದಿನ ಅನುಷ್ಠಾನ ಮಾಡದವರು ಈಗ ಜಾತಿ ಗಣತಿ ಅನುಷ್ಠಾನ ಮಾಡುವ ಮಾತನಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಲಾಭವಷ್ಟೆ ಇದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಆಡಳಿತದಲ್ಲಿ ನಿತ್ಯ ವೈಫಲ್ಯ ಎದ್ದು ಕಾಣುತ್ತಿದೆ. ಎರಡುಮೂರು ದಿನಗಳಿಂದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಶನಿವಾರ ರಾತ್ರಿ ಬಿದ್ದ ಮಳೆಗೆ ಹಲವು ಭಾಗಗಳಲ್ಲಿ ಎರಡುಮೂರು ಸಾವಿರ ಕುಟುಂಬಗಳು ಜಾಗರಣೆ ಮಾಡಿವೆ. ಮನೆಗಳಿಗೆ ನೀರು ನುಗ್ಗಿದೆ. ಅನಾಹುತ ಉಂಟಾಗಿದೆ ಎಂದರು.
ಬೆಂಗಳೂರಿನಲ್ಲಿ ಗುಂಡಿ ಮುಚ್ಚಲು ಗಡುವು ನೀಡಿದ ಡಿ.ಕೆ.ಶಿವಕುಮಾರ್ ಹಾರೆ ಹಿಡಿದು ಅಗೆದು ಗುಣಾತ್ಮಕ ಕೆಲಸ ಎಂದು ಹೇಳಿದ್ದಾರೆ. ಮಳೆಯಿಂದ ಏನಾಗಿದೆ ಎಂದು ಈಗ ಎಲ್ಲರಿಗೂ ಗೊತ್ತಾಗಿದೆ. ಕೇವಲ ಬೆಂಗಳೂರು ನಗರ ಮಾತ್ರವಲ್ಲ ರಾಜ್ಯದ ಹಲವಾರು ಭಾಗಗಳಲ್ಲಿ ನಿರೀಕ್ಷೆಗಿಂತ ಮಳೆ ಹೆಚ್ಚಾಗಿದೆ. ಬೆಳೆ ನಷ್ಟ ಉಂಟಾಗಿ ರೈತರು, ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಸರ್ಕಾರ ಹಗರಣಗಳ ಸುತ್ತ ಸುತ್ತುತ್ತಿದೆ. ಸಿಎಂ ಸೇರಿದಂತೆ ಯಾವುದೇ ಸಚಿವರಿಗೆ ಜನರ ಸಮಸ್ಯೆ ಬಗೆಹರಿಸುವ ಚಿಂತನೆ ಇಲ್ಲ ಎಂದು ಕುಮಾರಸ್ವಾಮಿ ಹರಿಹಾಯ್ದರು.