

ಶಿವಮೊಗ್ಗ: ವೀರಭದ್ರೇಶ್ವರ ಜಯಂತಿ ಧರ್ಮಸಭೆಗೆ ಸೀಮಿತವಾಗಬಾರದು. ಮನೆ-ಮಗಳಲ್ಲಿ ಆಚರಣೆ ಆಗಬೇಕಿದೆ. ಅದಕ್ಕೆ ವೀರಶೈವರು ಲಿಂಗವಂತರಾಗಬೇಕಿದೆ ಎಂದು ಬಿಳಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂದಿರದ ಹಿಂಭಾಗದ ಚೌಕಿಮಠ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ತ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಅವರು, ವೀರಶೈವ ಸಮಾಜದ ಪ್ರತಿಯೊಬ್ಬರೂ ಲಿಂಗವನ್ನು ಧರಿಸಬೇಕು. ಈ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಬೇಕು. ಇಷ್ಟಲಿಂಗ ಧರಿಸಿಕೊಂಡು ಇಡೀ ಮಾನವ ಧರ್ಮಕ್ಕೆ ಜಯ ಸಿಗುವಂತೆ ಮಾಡಬೇಕಿದೆ ಎಂದರು.
ಮಳಲಿ ಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವಮೊಗ್ಗದಲ್ಲಿ ಕೇದಾರ ಶ್ರೀಗಳ ನೇತೃತ್ವದಲ್ಲಿ ಇಷ್ಟಲಿಂಗ ಪೂಜೆ ಆಗಿದ್ದು ಕೆಲವೇ ದಿನಗಳಲ್ಲಿ ಎಲ್ಲರ ಆಪತ್ತು ದೂರ ಆಪತ್ತು ದೂರ ಆಗಲಿದೆ ಎಂದು ಹೇಳಿದರು. ಸಂಗೀತಯುಕ್ತ ಇಷ್ಟಲಿಂಗ ಪೂಜೆಯಲ್ಲಿ ಸಾಕಷ್ಟು ಮೌಲ್ಯಗಳಿವೆ. ವೀರಶೈವರಲ್ಲಿರುವ ಪೂಜೆಗಳು ಶಾರೀರಿಕ ಮತ್ತು ಸಮಾಜದ ಸ್ವಾಸ್ಥೃಕ್ಕಾಗಿ ಇವೆ. ವೀರಶೈವ ಧರ್ಮ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕಿದೆ. ಇಷ್ಟಲಿಂಗ ಪೂಜೆ ವೀರಶೈವ ಧರ್ಮದ ಹೆಗ್ಗುರುತು ಆಗಿದೆ. ಹಣ, ಐಶ್ವರ್ಯಕ್ಕಿಂತ ಇಷ್ಟಲಿಂಗ ಎನ್ನುವುದು ನಿಜವಾದ ಸಂಪತ್ತು ಆಗಿದೆ ಎಂದು ಬಣ್ಣಿಸಿದರು.