ಹೊಸ ಬದುಕಿಗೆ ಅಂಕುರ ತಪ್ಪದಿರಿ ಎಚ್ಚರ..

page 6 2
Published on

ಕರೊನಾ ಭೀತಿ ಹಿನ್ನೆಲೆಯಲ್ಲಿ ಜಾರಿಗೊಂಡಿದ್ದ ಲಾಕ್​ಡೌನ್ ಬಹುತೇಕ ಅಂತ್ಯಗೊಳ್ಳುತ್ತಿದ್ದು, ಎರಡೂವರೆ ತಿಂಗಳಿಂದ ಸಂಕೀರ್ಣಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ರಾಜ್ಯದಲ್ಲಿ ಸೋಂಕಿತ ಪ್ರಕರಣಗಳು ವ್ಯಾಪಕವಾಗಿ ಏರಿಕೆಯಾಗುತ್ತಿವೆಯಾದರೂ ಕರೊನಾ ಜತೆಗೆ ಬದುಕು ಅನಿವಾರ್ಯ ಎಂಬಂತಾಗಿದೆ. ಅಲ್ಲದೆ ಲಾಕ್​ಡೌನ್ ಮುಂದುವರಿದರೆ ಈಗಾಗಲೆ ಚಿಂತಾಜನಕ ಸ್ಥಿತಿಯಲ್ಲಿರುವ ಆರ್ಥಿಕತೆ ಮತ್ತಷ್ಟು ಹದಗೆಡುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ವಿಧಿಸಿದ್ದ ನಿರ್ಬಂಧಗಳು ಹಂತಹಂತವಾಗಿ ತೆರವುಗೊಳ್ಳುತ್ತಿದೆ. ಇಂದಿನಿಂದ ಧಾರ್ವಿುಕ ಕೇಂದ್ರಗಳು, ಮಾಲ್, ಹೋಟೆಲ್​ಗಳು ಕೆಲವು ನಿಬಂಧನೆಗಳೊಂದಿಗೆ ಆರಂಭಗೊಳ್ಳುತ್ತಿವೆ.

ದೇಗುಲಗಳಲ್ಲಿ ದರ್ಶನಕ್ಕಷ್ಟೇ ಅವಕಾಶ: ಧರ್ಮಸ್ಥಳ, ಶೃಂಗೇರಿ, ಕೊಲ್ಲೂರು ಸೇರಿ ರಾಜ್ಯದ ಬಹುತೇಕ ದೇವಾಲಯಗಳಲ್ಲಿ ಸೋಮವಾರದಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆಯಾದರೂ ಸಾಕಷ್ಟು ನಿಬಂಧನೆಗಳನ್ನು ವಿಧಿಸಲಾಗಿದೆ. ಈ ಹಿಂದಿನಂತೆ ತೀರ್ಥ, ಪ್ರಸಾದ ವಿನಿಯೋಗ, ಆರತಿ ಮಾಡುವುದು ಸೇರಿ ಇನ್ನಿತರ ಕಾರ್ಯಗಳಿಗೆ ಅವಕಾಶವಿರುವುದಿಲ್ಲ. ದರ್ಶನವನ್ನಷ್ಟೇ ಮಾಡಬೇಕಿದೆ. ದೇವಸ್ಥಾನಕ್ಕೆ ಪ್ರವೇಶಿಸುವುದಕ್ಕೂ ಮುನ್ನ ಭಕ್ತರು ಮಾಸ್ಕ್ ಧರಿಸಬೇಕು. ಪ್ರತಿ ಭಕ್ತರ ವಿವರ ಪಡೆಯುವುದು, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ರೋಗ ಲಕ್ಷಣವಿರುವ, 60 ವರ್ಷ ಮೇಲ್ಪಟ್ಟವರ ಪ್ರವೇಶ ನಿಷಿದ್ಧ. ದೇವಸ್ಥಾನದಲ್ಲಿ ಗುಂಪು ಗೂಡುವುದನ್ನು ತಡೆಯಲು ನಿಯಮಿತ ಭಕ್ತರ ಪ್ರವೇಶಕ್ಕಷ್ಟೇ ಅವಕಾಶ ನೀಡಲಾಗುತ್ತದೆ. ಅದರಂತೆ ಪ್ರತಿ ಗಂಟೆಗೆ 100 ಭಕ್ತರು ದೇವಸ್ಥಾನದೊಳಗೆ ಬರುವಂತಹ ವ್ಯವಸ್ಥೆ ಮಾಡಲಾಗುತ್ತಿದೆ.

ಎಲ್ಲೆಡೆ ಸ್ಯಾನಿಟೈಸ್: ಸೋಮವಾರದಿಂದ ದರ್ಶನ ಆರಂಭವಾಗುತ್ತಿರುವ ಕಾರಣ ಎಲ್ಲ ದೇವಸ್ಥಾನಗಳಲ್ಲೂ ಸ್ಯಾನಿಟೈಸ್ ಮಾಡಲಾಗಿದೆ. ಜತೆಗೆ ಭಕ್ತರು ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಬಾಕ್ಸ್​ಗಳನ್ನು ಹಾಕಲಾಗಿದೆ. ಹೆಚ್ಚಿನ ಭಕ್ತರು ಬರುವೆಡೆ, ಸರತಿ ಸಾಲಿನಲ್ಲಿ ಬರಬೇಕಾದರೆ ದೈಹಿಕ ಅಂತರ ಕಾಪಾಡಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗಿದೆ.

ಮಾಲ್​ಗಳು ಶಾಪಿಂಗ್​ಗಷ್ಟೇ ಸೀಮಿತ: ಶಾಪಿಂಗ್ ಮಾಲ್​ಗಳು ಕೂಡ ಸೋಮವಾರದಿಂದ ತೆರೆಯುತ್ತಿದ್ದು, ಬರುವ ಜನರಿಗೆ ಸೋಂಕು ತಗುಲದಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಾಲ್​ಗಳಲ್ಲಿನ ಚಿತ್ರಮಂದಿರ, ಮಕ್ಕಳ ಮನರಂಜನಾ ಚಟುವಟಿಕೆಗಳಿಗೆ ಇನ್ನೂ ಅವಕಾಶ ನೀಡಿಲ್ಲ. ಹೀಗಾಗಿ ಮಾಲ್​ಗೆ ಬರುವವರು ತಮಗೆ ಬೇಕಾದ ವಸ್ತುಗಳ ಖರೀದಿ ಮಾತ್ರ ಮಾಡಬೇಕಿದೆ. ಮಾಲ್​ಗಳಿಗೆ ಪ್ರವೇಶಿಸುವುದಕ್ಕೂ ಮುನ್ನ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಥರ್ಮಲ್ ಸ್ಕ್ರೀನಿಂಗ್​ಗೆ ಒಳಗಾಗಬೇಕಿದೆ. ರೋಗ ಲಕ್ಷಣಗಳಿರುವ ಯಾರೂ ಮಾಲ್ ಒಳಗೆ ಪ್ರವೇಶಿಸುವಂತಿಲ್ಲ. ಮಾಲ್​ಗಳಲ್ಲಿನ ಮಳಿಗೆಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಆಗಾಗ ಸ್ಯಾನಿಟೈಸರ್ ಬಳಸಬೇಕಿದೆ. ಗ್ರಾಹಕರು ಹೆಚ್ಚಾಗಿ ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡಬೇಕಿದೆ. ಹಾಗೆಯೇ, ಕರೊನಾ ಕುರತಂತೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕಿದೆ.

ಹೋಟೆಲ್​ಗಳಲ್ಲೂ ಅಂತರ ನಿಯಮ: ಪಾರ್ಸೆಲ್​ಗೆ ಸೀಮಿತವಾಗಿದ್ದ ಹೋಟೆಲ್​ಗಳಲ್ಲಿ ಸೆಲ್ಪ್​ಸರ್ವೀಸ್ ಆರಂಭವಾಗುತ್ತಿದೆ. ಆದರೆ 50ಕ್ಕಿಂತ ಹೆಚ್ಚಿನ ಜನರು ಇರುವಂತಿಲ್ಲ. ಪ್ರತಿ ಟೇಬಲ್​ಗಳ ನಡುವೆ ಗಾಜುಗಳನ್ನು ಅಳವಡಿಸುವುದು ಅಥವಾ ಗ್ರಾಹಕರು ಪರಸ್ಪರ ಸಂಪರ್ಕ ಹೊಂದದಂತೆ ವ್ಯವಸ್ಥೆ ಮಾಡಬೇಕಿದೆ. ಗ್ರಾಹಕರು ತೆರಳಿದ ನಂತರ ಟೇಬಲ್​ಗಳನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಇಲ್ಲೂ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕಿದೆ. ಗ್ರಾಹಕರಿಗೆ ನೀಡುವ ತಟ್ಟೆಯಲ್ಲಿ ಬಾಳೆ ಎಲೆ ಹಾಕುವುದು ಕಡ್ಡಾಯವಾಗಿದೆ. ಶುಚಿತ್ವಕ್ಕೆ ಆದ್ಯತೆ ನೀಡಬೇಕಿದೆ. ಸ್ಟೀಲ್ ಅಥವಾ ಇನ್ನಿತರ ಮರುಬಳಕೆ ತಟ್ಟೆ, ಲೋಟ, ಚಮಚಗಳ ಬದಲಿಗೆ, ಪೇಪರ್ ತಟ್ಟೆ, ಲೋಟ, ಚಮಚಗಳ ಬಳಕೆಗೆ ಒತ್ತು ನೀಡಬೇಕೆಂದು ಸೂಚಿಸಲಾಗಿದೆ.

ಐಟಿ-ಬಿಟಿ, ಕಾರ್ಖಾನೆಗಳು ಸಹಜ ಸ್ಥಿತಿಗೆ: ಈಗಾಗಲೆ ಐಟಿ-ಬಿಟಿ ಕಂಪನಿಗಳು ಆರಂಭಗೊಂಡಿದ್ದು, ಕೆಲ ಕಂಪನಿಗಳು ವರ್ಕ್ ಫ್ರಂ ಹೋಂ ಮುಂದುವರಿಸಿವೆ. ಇತ್ತ ಕಾರ್ಖಾನೆಗಳು ಪುನರಾರಂಭವಾಗಿದ್ದರೂ, ಪೂರ್ಣ ಪ್ರಮಾಣದಲ್ಲಿ ಆಗಿರಲಿಲ್ಲ. ಇದೀಗ, ಸಂಸ್ಥೆಗಳು ಉತ್ಪಾದನಾ ಕಾರ್ಯ ಶುರು ಮಾಡಲು ಸಿದ್ಧತೆ ಮಾಡಿಕೊಂಡಿವೆ. ಸೋಮವಾರದ ನಂತರ ಹಂತಹಂತವಾಗಿ ಶುರುವಾಗಯವ ಸಾಧ್ಯತೆಗಳಿವೆ.

ಪ್ರಯಾಣಿಕರ ಸಂಖ್ಯೆ ಏರಿಕೆ ಸಾಧ್ಯತೆ: ರಾಜ್ಯದಲ್ಲಿ ಬಸ್, ರೈಲು, ವಿಮಾನ ಸೇವೆ ಪುನರಾರಂಭವಾದರೂ ಕರೊನಾ ಭೀತಿಯಿಂದ ಜನ ಸಮೂಹ ಸಾರಿಗೆಗಳಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದರು. ಆದರೀಗ, ಕರೊನಾ ಜನತೆಗೆ ಜೀವನ ಸಾಗಿಸಬೇಕಿರುವುದರಿಂದ ಮತ್ತು ಒಂದೊಂದೇ ಚಟುವಟಿಕೆಗಳು ಪುನರಾರಂಭವಾಗುತ್ತಿರುವುದರಿಂದ ಸಮೂಹ ಸಾರಿಗೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ.

ಯಡೂರು, ಶ್ರೀಶೈಲದಲ್ಲಿ ಅಗತ್ಯ ಸಿದ್ಧತೆ: ಜೂ. 8ರಿಂದ ದೇವಸ್ಥಾನಗಳ ಬಾಗಿಲು ತೆರೆಯಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವಸ್ಥಾನ ಮತ್ತು ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಕಾಡಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕರ್ನಾಟಕ-ಮಹಾರಾಷ್ಟ್ರ ಹಾಗೂ ಅನ್ಯ ರಾಜ್ಯದ ಜನರ ಕುಲದೈವ ಮತ್ತು ಶ್ರದ್ಧಾಸ್ಥಾನಗಳಾಗಿರುವ ಯಡೂರು ಹಾಗೂ ಶ್ರೀಶೈಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಎಲ್ಲರೂ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಸ್ಯಾನಿಟೈಸ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಕುಕ್ಕೆಯಲ್ಲಿ ಸೀಮಿತ ಸೇವೆ: ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನಿಂದ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿ ಬೇರೆ ಸೇವೆಗಳಿಗೆ ಮುಂದಿನ ಆದೇಶದ ತನಕ ಅವಕಾಶವಿಲ್ಲ ಎಂದು ದೇವಳದ ಆಡಳಿತಾಧಿಕಾರಿ, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net