

ಕರೊನಾ ಸೋಂಕು ಪತ್ತೆಯಾದಾಗಿನಿಂದ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯವೈಖರಿ, ವಿಳಂಬನೀತಿ, ಜಗತ್ತನ್ನು ತಪು್ಪದಾರಿಗೆ ಎಳೆದ ಅದರ ಹೇಳಿಕೆಗಳು, ಸೋಂಕು ಪ್ರಸರಣ ತಡೆಯುವಲ್ಲಿ ವಹಿಸಿದ ನಿರ್ಲಕ್ಷ್ಯ ಧೋರಣೆಗಳ ಬಗ್ಗೆ ಅಂತಾರಾಷ್ಟ್ರೀಯ ವಲಯದಲ್ಲಿ ಚರ್ಚೆ ಆಗುತ್ತಲೇ ಇದೆ. ಡಬ್ಲ್ಯುಎಚ್ಒ ಸಕಾಲದಲ್ಲಿ ಎಚ್ಚೆತ್ತುಕೊಂಡು ಜಗತ್ತನ್ನೂ ಎಚ್ಚರಿಸಿದ್ದರೆ ಮತ್ತು ನಿಷ್ಪಕ್ಷಪಾತವಾಗಿ ನಡೆದುಕೊಂಡಿದ್ದರೆ ಖಂಡಿತವಾಗಿಯೂ ಕರೊನಾದ ಹಾವಳಿ ಈ ಮಟ್ಟಿಗೆ ಹೆಚ್ಚುತ್ತಿರಲಿಲ್ಲ ಎಂಬುದು ನಿರ್ವಿವಾದ. ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದ್ದ ಸಮಯದಲ್ಲೇ ಡಬ್ಲ್ಯುಎಚ್ಒ ಮಾಡಿದ ಎಡವಟ್ಟುಗಳು ಒಂದೇರಡಲ್ಲ. ‘ಕರೊನಾ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ’ ಎಂಬ ಹೇಳಿಕೆ ಮೂಲಕ ಹಸಿಸುಳ್ಳನ್ನು ಹರಡಿತು. ಸೋಂಕು ವೇಗವಾಗಿ ಪ್ರಸರಣವಾಗುತ್ತಿದ್ದ ಸಮಯದಲ್ಲೂ, ‘ಜಗತ್ತಿಗೆ ಅಪಾಯವಿಲ್ಲ’ ಎಂದು ದಾರಿ ತಪ್ಪಿಸಿತು. ಇಡೀ ಜಗತ್ತೇ ಕರೊನಾ ಹಾವಳಿಯಿಂದ ತತ್ತರಿಸುವಾಗಲೂ ಸೂಕ್ತ ಮಾಗೋಪಾಯಗಳನ್ನು ಕಂಡುಕೊಳ್ಳುವಲ್ಲಿ, ನಿಖರವಾದ ಅರಿವು ಮೂಡಿಸುವಲ್ಲಿ ಸಂಪೂರ್ಣ ವಿಫಲವಾಯಿತು.
ಹಾಗಾಗಿಯೇ, ಇಷ್ಟು ದಿನಗಳವರೆಗೆ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಹರಿಹಾಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಹೆಜ್ಜೆ ಮುಂದೆ ಹೋಗಿ, ಡಬ್ಲ್ಯುಎಚ್ಒನಿಂದ ಹೊರಬರುವುದಾಗಿ ಘೋಷಿಸಿದ್ದಾರೆ. ಅಮೆರಿಕದ ಈ ನಡೆ ಆತುರದ್ದು ಹೌದಾದರೂ, ಡಬ್ಲ್ಯುಎಚ್ಒ ತನ್ನ ವಿಫಲತೆಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವುದು ದುರದೃಷ್ಟಕರ. 194 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಪ್ರತಿ ವರ್ಷ 450 ಮಿಲಿಯನ್ ಡಾಲರ್ ದೇಣಿಗೆ ಒದಗಿಸುತ್ತಿದ್ದರೆ, ಚೀನಾದ ಕೊಡುಗೆ ಕೇವಲ 40 ಮಿಲಿಯನ್ ಡಾಲರ್. ಆದರೂ, ಅದು ಚೀನಾದ ಒತ್ತಡ, ಪ್ರಭಾವಕ್ಕೆ ಒಳಗಾಗಿ ಯಾಕೆ ವರ್ತಿಸಿತು, ಅಂತಾರಾಷ್ಟ್ರೀಯ ವಲಯದ ಸ್ವಾಸ್ಥ್ಯವನ್ನು ಏಕೆ ಕಡೆಗಣಿಸಿತು, ತಪು್ಪ ಮಾಹಿತಿಗಳಿಂದ ಏಕೆ ದಾರಿ ತಪ್ಪಿಸಿತು ಎಂಬ ಪ್ರಶ್ನೆಗಳಿಗೆ ಡಬ್ಲ್ಯುಎಚ್ಒ ಸಬೂಬುಗಳನ್ನಲ್ಲ ಸ್ಪಷ್ಟ ಮತ್ತು ವಾಸ್ತವದಿಂದ ಕೂಡಿದ ಉತ್ತರ ನೀಡಬೇಕಾಗಿದೆ. ಡಬ್ಲ್ಯುಎಚ್ಒಗೆ ನೀಡುವ ದೇಣಿಗೆಯನ್ನು ಕಳೆದ ತಿಂಗಳಲ್ಲೇ ತಡೆ ಹಿಡಿದ ಟ್ರಂಪ್, ಸಂಸ್ಥೆಯಲ್ಲಿ 30 ದಿನಗಳ ಒಳಗೆ ಸುಧಾರಣೆ ತರದಿದ್ದರೆ ಹೊರ ಹೋಗುವುದಾಗಿ ಮೇ 18ರಂದು ಡಬ್ಲ್ಯುಎಚ್ಒ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಚೀನಾ ಈ ಸಂಸ್ಥೆಗೆ ಮುಂದಿನ ಎರಡು ವರ್ಷದ ಅವಧಿಗೆ ಎರಡು ಬಿಲಿಯನ್ ಡಾಲರ್ ನೆರವು ನೀಡುವುದಾಗಿ ಘೋಷಿಸಿತು.
ಅಮೆರಿಕ ಸಂಸ್ಥೆಯಿಂದ ಹೊರಗೆ ಬರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ, ಅದು ಚೀನಾದ ದೇಣಿಗೆ ಪಡೆದು ಮತ್ತಷ್ಟು ಏಕಪಕ್ಷೀಯವಾಗಿ ವರ್ತಿಸುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಅಂತಾರಾಷ್ಟ್ರೀಯ ವಲಯ ಒತ್ತಡ ಸೃಷ್ಟಿಸಿ, ಪಾರದರ್ಶಕ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಸಿದ್ಧಗೊಳಿಸಬೇಕಿದೆ. ಆರಂಭದಲ್ಲೇ ಡಬ್ಲ್ಯುಎಚ್ಒ ಸೋಂಕಿನ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದರೆ, ಸಂಸ್ಥೆಯ ವರ್ಚಸ್ಸು, ನಂಬಿಕೆ ಹೆಚ್ಚುವ ಜತೆಗೆ ಲಕ್ಷಾಂತರ ಜೀವಗಳು ಉಳಿಯುತ್ತಿದ್ದವೇನೋ. ಇನ್ನಾದರೂ ಅದು ತನ್ನ ತಪ್ಪನ್ನು ತಿದ್ದುಕೊಳ್ಳಲಿ.