ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡುವವರ ಮೇಲೆ ಕ್ರಮವಾಗಲಿ

oplus_0
oplus_0
Published on

ರಾಣೆಬೆನ್ನೂರ: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಹಿಂದು ಧರ್ಮದ ಬಗ್ಗೆ ಷಡ್ಯಂತ್ರ ಮಾಡುತ್ತಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಗರ ಮತ್ತು ತಾಲೂಕು ಟಕದ ವತಿಯಿಂದ ಬುಧವಾರ ನಗರದ ಬಸ್​ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು.

ರೈಲ್ವೆ ನಿಲ್ದಾಣ ರಸ್ತೆಯ ಬಿಜೆಪಿ ಕಾರ್ಯಾಲಯದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಬಸ್​ ನಿಲ್ದಾಣದ ವೃತ್ತಕ್ಕೆ ಬಂದ ಕಾರ್ಯಕರ್ತರು ಮಾನವ ಸರಪಳಿ ನಿಮಿರ್ಸಿ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಧರ್ಮಸ್ಥಳ ವಿರುದ್ಧ ಯೂಟ್ಯೂಬ್​ನಲ್ಲಿ ವೀಡಿಯೋ ಹರಿಬಿಟ್ಟ ದೂತ್​ ಸಮೀರ್​, ಗಿರೀಶ ಮಟ್ಟೆಣ್ಣನವರ, ಮಹೇಶ ತಿಮರೋಡಿ ವಿರುದ್ಧ ಘೋಷಣೆ ಕೂಗಿದರು.

ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಹಿಂದುಗಳ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದ ವಿರುದ್ಧ ದೂತ್​ ಸಮೀರ್​, ಗಿರೀಶ ಮಟ್ಟೆಣ್ಣನವರ, ಮಹೇಶ ತಿಮರೋಡಿ ಹಾಗೂ ಕೆಲ ಕಾಣದ ಕೈಗಳು ಸೇರಿಕೊಂಡು ಇಲ್ಲಸಲ್ಲದ ಆರೋಪ ಮಾಡಿ ಕ್ಷೇತ್ರದ ಹೆಸರು ಕೆಡಿಸುವ ಜತೆಗೆ ಹಿಂದು ಧರ್ಮ ತುಳಿಯುವ ಹುನ್ನಾರ ಮಾಡುತ್ತಿವೆ.

ರಾಜ್ಯ ಸರ್ಕಾರ ಎಸ್​ಐಟಿ ರಚನೆ ಮಾಡಿ ತನಿಖೆ ನಡೆಸಿದಾಗ ಚನ್ನಯ್ಯ ತೋರಿಸಿದ ಯಾವ ಜಾಗದಲ್ಲೂ ಶವಗಳ ಕಳೆಬರಹ ದೊರೆತಿಲ್ಲ. ಅಲ್ಲದೆ ಅನನ್ಯ ಭಟ್​ ಎಂಬ ಯುವತಿ ಇಲ್ಲದಿರುವ ಕುರಿತು ಸ್ವತಃ ಸುಜಾತಾ ಭಟ್​ ಮಾಧ್ಯಮದವರ ಎದುರು ಹೇಳಿಕೊಂಡಿದ್ದಾರೆ. ಆದರೂ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಇನ್ನೂ ಮುಂದಾಗುತ್ತಿಲ್ಲ.

ಇದನ್ನು ನೋಡಿದರೆ ಧರ್ಮಸ್ಥಳ ಕ್ಷೇತ್ರ ಮತ್ತು ಹಿಂದು ಧರ್ಮವನ್ನು ಕುಗ್ಗಿಸುವ ಹುನ್ನಾರ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಎನ್​ಐಎ ಮೂಲಕ ಈ ಪ್ರಕರಣವನ್ನು ತನಿಖೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೆ ಮನವಿ ಸಲ್ಲಿಸಿದರು.

ಪಕ್ಷದ ನಗರ ಟಕದ ಅಧ್ಯಕ್ಷ ಮಂಜುನಾಥ ಕಾಟಿ, ಗ್ರಾಮೀಣ ಟಕದ ಅಧ್ಯಕ್ಷ ಸುಭಾಸ ಸಿರಗೇರಿ, ನಗರಸಭೆ ಸದಸ್ಯರಾದ ಮಲ್ಲಣ್ಣ ಅಂಗಡಿ, ನಿಂಗರಾಜ ಕೋಡಿಹಳ್ಳಿ, ರಮೇಶ ಕರಡೆಣ್ಣನವರ, ಪ್ರಕಾಶ ಪೂಜಾರ, ಪ್ರಮುಖರಾದ ಭಾರತಿ ಜಂಬಗಿ, ಎಸ್​.ಎಸ್​. ರಾಮಲಿಂಗಣ್ಣನವರ, ಎ.ಬಿ. ಪಾಟೀಲ, ಚೋಳಪ್ಪ ಕಸವಾಳ, ಮೈಲಪ್ಪ ದಾಸಪ್ಪನವರ, ಸಿದ್ದು ಚಿಕ್ಕಬಿದರಿ, ನಾರಾಯಣ ಪವಾರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net