

ಕೋಲಾರ: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ಎಚ್ಚವಹಿಸಬೇಕು, ಅಂಗಡಿ ಮಾಲೀಕರು ವಿನಾಕಾರಣ ಏನಾದರೂ ತೊಂದರೆ ನೀಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ ಇಲಾಖೆಯ ಸಹಯೋಗದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಪೂರಕ ಸಿದ್ಧತೆ ಸಭೆಯಲ್ಲಿ ಮಾತನಾಡಿ, ಮುಂಗಾರು ಪ್ರವೇಶ ಮಾಡಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಕೈಗೊಳ್ಳುತ್ತಿದ್ದಾರೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಸುಮಾ ಮಾತನಾಡಿ, ಬಂಗಾರಪೇಟೆ ತಾಲೂಕಿನಲ್ಲಿ 11,999, ಕೆಜಿಎಫ್ 6,376, ಕೋಲಾರ 14,334, ಮಾಲೂರು 11,987, ಮುಳಬಾಗಿಲು 18,136, ಶ್ರೀನಿವಾಸಪುರ 10,068 ಸೇರಿ ಒಟ್ಟು 72,900 ಮುಂಗಾರು ಗುರಿ ವಿಸ್ತೀರ್ಣ ಹೊಂದಿದೆ ಎಂದು ತಿಳಿಸಿದರು.
ಹಂಗಾಮಿನಲ್ಲಿ ರಿಯಾಯಿತಿ ಕಾರ್ಯಕ್ರಮದಡಿ ರಾಗಿ 152.40 ಕ್ವಿಂಟಾಲ್ ದಾಸ್ತಾನು, 24.45 ವಿತರಣೆ ಮಾಡಲಾಗಿದೆ. ತೊಗರಿ 27.95 ಕ್ವಿಂಟಾಲ್ ದಾಸ್ತಾನಿದ್ದು, 11.50 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. ಜತೆಗೆ ಅಲಸಂದಿ 26.80 ಕ್ವಿಂಟಾಲ್ ದಾಸ್ತಾನಿದ್ದು,2.50 ಕ್ವಿಂಟಾಲ್ ವಿತರಣೆ ಮಾಡಲಾಗಿದೆ, ನೆಲಗಡಲೆ 499.80 ಕ್ವಿಂಟಾಲ್ ದಾಸ್ತಾನು ಮಾಡಿದ್ದು, 280.20 ಬಿತ್ತನೆ ಬೀಜಗಳ ದಾಸ್ತಾನು ಮತ್ತು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಪಿಎಸ್ ಮೂಲಕ ಬೆಳೆ ಸಮೀಕ್ಷೆ ಮಾಡಲಾಗುತ್ತದೆ. ತಾಲೂಕುಮಟ್ಟದಲ್ಲಿ ತಹಸೀಲ್ದಾರ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ವಾರ್ಷಿಕ 3 ಅವಧಿಗಳಲ್ಲಿ ಸಮೀಕ್ಷೆಯನ್ನು ಪಿ.ಆರ್ಗಳು ಮೊಬೈಲ್ನಲ್ಲಿ ಸಮೀಕ್ಷೆಯ ಆ್ಯಪ್ ಮೂಲಕ ಸಮೀೆ ನಡೆಸುತ್ತಾರೆ. ರೈತರು ಸರ್ಕಾರದ ಯಾವುದೇ ಸೌಲಭ್ಯವನ್ನು ಬೆಳೆ ವಿವರಗಳನ್ನು ನಮೂದು ಮಾಡಬೇಕು ಎಂದರು.
ಕೃಷಿ ಇಲಾಖೆ, ಕಂದಾಯ ಇಲಾಖೆ, ನೀರಾವರಿ ಇಲಾಖೆಗಳು ಸೇರಿ ಬೆಳೆಗಳ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತಿತ್ತು, ಇದರಿಂದ ಬೆಳೆ ಪ್ರದೇಶದ ಅಂಕಿ ಅಂಶಗಳು ಪರಿಪೂರ್ಣ ಮತ್ತು ಸಮರ್ಪಕವಾದ ಚಿತ್ರಣ ಸಿಗುತ್ತಿರಲಿಲ್ಲ. ಆದ್ದರಿಂದ ಸರ್ವೇ, ಉಪಸರ್ವೇ ಸಂಖ್ಯೆವಾರು ಬೆಳೆ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆ ತರಲು ನಿರ್ಧರಿಸಲಾಗಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಬೆಳೆಸಮೀಕ್ಷೆ ಅನುಷ್ಠಾನ ಸಮಿತಿಗಳ ಕುರಿತು ಜವಾಬ್ದಾರಿಗಳನ್ನು ತಿಳಿಸಿದರು.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಆತ್ಮನಿರ್ಭರ ಭಾರತ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಆಹಾರ ಉತ್ಪನ್ನಗಳ ಸಂಸ್ಕರಣೆಯನ್ನು ಪ್ರೋತ್ಸಾಹಿಸಲು ಯುವಕರಿಗೆ ಉದ್ಯೋಗಾವಕಾಶ ಮತ್ತು ಮೂಲಸೌಕರ್ಯ ಸೃಷ್ಟಿ ಮಾಡುವ ಸಲುವಾಗಿ ಹೊಸ ಹಾಗೂ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಬಲವರ್ಧನೆ ಮತ್ತು ಔಪಧೋಪಚಾರ ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರವಿಣ್ ಪಿ.ಬಾಗೇವಾಡಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕುಮಾರಸ್ವಾಮಿ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ನಾಗೇಶ್ ಇದ್ದರು.
ಕಡಿಮೆ ಬಡ್ಡಿಯಲ್ಲಿ ಸಾಲ ವಿತರಣೆ
ಹೊಸ ಆಹಾರ ಸಂಸ್ಕರಣ ಉದ್ದಿಮೆ ಪ್ರಾರಂಭಿಸಲು ಅಥವಾ ಚಾಲ್ತಿಯಲ್ಲಿರುವ ಉದ್ಯಮ ವಿಸ್ತರಿಸಲು ಕೃಷಿ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಯೋಜನೆಗಳಲ್ಲಿ ಸಹಾಯಧನ ಬ್ಯಾಂಕ್ ಸಾಲ ಪಡೆದಿದ್ದರೂ ಸಹ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಲ್ಲಿ ಉಪಕರಣಗಳ ಖರೀದಿಗೆ ಪ್ರತಿ ಸದಸ್ಯರಿಗೆ ಗರಿಷ್ಠ 40,000 ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುವುದು. ಒಂದು ಗುಂಪು ಸ್ವ ಸಹಾಯ ಸಂಘಕ್ಕೆ ನಾಲ್ಕು ಲಕ್ಷ ರೂ.ಸಾಲ ಪಡೆಯಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.