

ಬೆಂಗಳೂರು: ಸ್ಥಳೀಯ ಸಂಸ್ಕೃತಿ ಬೇರು ಗಟ್ಟಿಯಾದರೆ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಚಿತ್ರ ಸಾಹಿತಿ ಕವಿರಾಜ್ ಅಭಿಪ್ರಾಯಪಟ್ಟರು.
ಪೂರ್ವ ಹೈಲ್ಯಾಂಡ್ ಅಪಾರ್ಟ್‌ಮೆಂಟ್ ಕನ್ನಡ ರಾಜ್ಯೋತ್ಸವ ಸಮಿತಿ ಸೋಮವಾರ ಕನಕಪುರ ರಸ್ತೆಯ ತನ್ನ ವಸತಿ ಸಮುಚ್ಛಯದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ರಾಜ್ಯೋತ್ಸವ’ಕಾರ್ಯಕ್ರಮದಲ್ಲಿ ಮಾತನಾಡಿದರು.
ನೆರೆಯ ರಾಜ್ಯಗಳಲ್ಲಿ ಚಿತ್ರಗಳನ್ನು ತೆಗೆಯುವಾಗ ಸ್ಥಳೀಯ ಸಂಸ್ಕೃತಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೀಗಾಗಿ, ಆ ರಾಜ್ಯಗಳ ಪ್ರಾದೇಶಿಕ ಭಾಷೆಗಳು ಗಟ್ಟಿಯಾಗಿ ಉಳಿದಿವೆ. ನಮ್ಮ ರಾಜ್ಯದಲ್ಲೂ ಸ್ಥಳೀಯ ಸಂಸ್ಕೃತಿ ಬಿಂಬಿಸುವ ಚಿತ್ರಗಳು ಹೆಚ್ಚು ಬಂದರೆ ಕನ್ನಡದ ಅಸ್ತಿತ್ವದ ಜತೆಗೆ ಅಸ್ಮಿತೆಯು ಉಳಿಯುತ್ತದೆ. ಕನ್ನಡವನ್ನು ಹೆಚ್ಚು ಬಳಸುವ ಮೂಲಕ ನಾವೆಲ್ಲರೂ ಭಾಷೆ ಉಳಿಸಲು ಮುಂದಾಗಬೇಕು ಎಂದರು.
ಅನೇಕ ಸವಾಲುಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಸ್ಮಿತೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲರೂ ಜಾಗೃತರಾಗುವ ಅವಶ್ಯಕತೆ ಇದೆ. ಎಲ್ಲರಲ್ಲಿಯೂ ಕನ್ನಡ ಅಭಿಮಾನ ಮೂಡಬೇಕು. ಅಖಂಡ ಕರ್ನಾಟಕದ ಸಮಗ್ರತೆ ಮತ್ತು ಎಕತೆಯಿಂದ ಭಾಷೆ, ನೆಲ, ಸಂಸ್ಕೃತಿ ಉಳಿಯುವಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಭಾಷೆಯನ್ನು ಮರೆಯಬಾರದು ಎಂದು ನಟಿ ಐಶಾನ್ ಶೆಟ್ಟಿ ಕಿವಿ ಮಾತು ಹೇಳಿದರು.
ಕನ್ನಡ ಪರಂಪರೆ ಬಿಂಬಿಸುವ ವಸ್ತು ಪ್ರದರ್ಶನ,ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ರಸಪ್ರಶ್ನೆ, ರಂಗೋಲಿ ಸ್ಪರ್ಧೆ, ದೇಸಿ ಕ್ರೀಡೆಗಳು ನಡೆದವು. ಮೊದಲ ಬಾರಿಗೆ ಅನ್ಯ ಭಾಷಿಕರು ನಾಡಗೀತೆ ಪ್ರಚುರಪಡಿಸಿದರು. ನಿವೃತ್ತ ಐಎಎಸ್ ಅಧಿಕಾರಿ ವಿದ್ಯಾಶಂಕರ್, ನಟಿ ಪೂಜಾ ಗಾಂಧಿ, ಸ್ಟ್ಯಾಂಡಪ್ ಕಾಮಿಡಿಯನ್ ರಾಘವೇಂದ್ರ ಆಚಾರ್ಯ,ಪೊಲೀಸ್ ಇನ್‌ಸ್ಪೆಕ್ಟರ್ ಎನ್. ಜಗದೀಶ್,ಪೂರ್ವ ಹೈಲ್ಯಾಂಡ್ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಡಿಬೈಂದು ಮತ್ತಿತರರಿದ್ದರು.