ಸಂಪಾದಕೀಯ: ಚಿಕಿತ್ಸೆಗೆ ಏಕರೂಪ ದರ; ಸುಪ್ರೀಂ ಕೋರ್ಟ್​ನಿಂದ ಮಹತ್ವದ ಸೂಚನೆ

edit 4
Published on

ಕರ್ನಾಟಕ ಸೇರಿ ದೇಶಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ರೋಗಿಗಳ ಚೇತರಿಕೆ ಪ್ರಮಾಣ ಏರಿಕೆ ಆಗಿರುವುದು ಕೊಂಚ ಸಮಾಧಾನದ ಸಂಗತಿ. ಜನರಲ್ಲಿ ಕರೊನಾ ಸೋಂಕಿನಷ್ಟೇ ಭಯ, ಅದಕ್ಕೆ ನೀಡುವ ಚಿಕಿತ್ಸೆ ಬಗೆಗೂ ಇದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಭಾರಿ ಒತ್ತಡ ಸೃಷ್ಟಿಯಾಗಿದೆ. ಹಾಗಾಗಿಯೇ, ಖಾಸಗಿ ಆಸ್ಪತ್ರೆಗಳಿಗೂ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಮತಿ ನೀಡಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ವಾರ್ಡ್​ಗಳನ್ನು ಸ್ಥಾಪಿಸಲಾಗಿದೆ. ಸಾಮಾನ್ಯ ಶೀತ, ಜ್ವರವನ್ನೂ ಈಗ ನಿರ್ಲಕ್ಷಿಸುವಂತಿಲ್ಲ. ಕರೊನಾ ಪರೀಕ್ಷೆಗೆ ಒಳಪಡಲೇಬೇಕು. ಆದರೆ, ಕರೊನಾ ಪರೀಕ್ಷೆಯ ದರ ಒಂದೊಂದು ರಾಜ್ಯದಲ್ಲಿ ಒಂದೊಂದು ಥರ ಇದೆ. ಈ ಪರೀಕ್ಷೆಗೆ ಹೆಚ್ಚು ಹಣ ಸುರಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಸೋಂಕು ಲಕ್ಷಣವಿರುವ ಕೆಲವರು ಟೆಸ್ಟ್​ಗೆ ಹಿಂದೇಟು ಹಾಕುವಂತಾಗಿದೆ. ಹಾಗಾಗಿಯೇ, ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ ಸರ್ಕಾರಗಳು ಈ ಮೊತ್ತವನ್ನು ಶೇಕಡ 50ರಷ್ಟು ಕಡಿಮೆ ಮಾಡಿ, ಜನರ ನೆರವಿಗೆ ಬಂದಿವೆ. ಆದರೆ, ಒಂದೊಂದು ರಾಜ್ಯದಲ್ಲಿ ಪ್ರತ್ಯೇಕ ದರ ಇರುವುದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಶುಕ್ರವಾರ ಈ ಕುರಿತ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಏಕರೂಪದ ದರ ನಿಗದಿ ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ, ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿರುವ ಸ್ಥಿತಿ ಮತ್ತು ಶವಗಳ ಜತೆ ಅಮಾನವೀಯ ವರ್ತನೆ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಚಿಕಿತ್ಸೆ ಹೊತ್ತಲ್ಲಿನ ಕೊರತೆಗಳನ್ನು ಸರಿಪಡಿಸುವಂತೆ ಸೂಚಿಸಿರುವ ನ್ಯಾಯಾಲಯ ಈ ಸಂಬಂಧದ ಎಲ್ಲ ವಾರ್ಡ್​ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಹೇಳಿದೆ.

ಮತ್ತೊಂದೆಡೆ, ದೆಹಲಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಗೆ ಹಾಸಿಗೆ ದರ ನಿಗದಿ ಪಡಿಸಲು ಕೇಂದ್ರ ಸರ್ಕಾರ ರೂಪಿಸಿದ್ದ ಸಮಿತಿ ಶುಕ್ರವಾರ ತನ್ನ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದೆ. ಈಗಿರುವ ದರಗಳಿಗಿಂತ ಶೇಕಡ 50ರಷ್ಟು ಕಡಿಮೆ ಶುಲ್ಕ ವಿಧಿಸಲು ಶಿಫಾರಸು ಮಾಡಿದೆ. ಕರೊನಾ ಸೋಂಕು ಪತ್ತೆ ಹಚ್ಚಲು ನಡೆಸುವ ಪರೀಕ್ಷೆಗೆ ಮತ್ತು ಚಿಕಿತ್ಸೆಗೆ ಏಕರೂಪದ ದರವನ್ನು ನಿಗದಿ ಮಾಡಬೇಕಿರುವುದು ಅವಶ್ಯಕ ಮತ್ತು ಅನಿವಾರ್ಯ ಕ್ರಮ. ಇದನ್ನು ಜಾರಿ ಮಾಡುವ ಮುಂಚೆ ಕೇಂದ್ರ ಸರ್ಕಾರ ಕೆಲ ಸೂಕ್ಷ್ಮಗಳನ್ನು ಪರಿಗಣಿಸಬೇಕು. ಗ್ರಾಮೀಣ, ಪಟ್ಟಣ ಮತ್ತು ಮಹಾನಗರ-ಈ ಮೂರೂಕಡೆ ಚಿಕಿತ್ಸಾ ವೆಚ್ಚಗಳು ಭಿನ್ನವಾಗಿ ಇರುತ್ತವೆ. ಸ್ವಾಭಾವಿಕವಾಗಿಯೇ, ಮಹಾನಗರಗಳಲ್ಲಿ ಕೊಂಚ ಹೆಚ್ಚು ದರ ವಿಧಿಸಲಾಗುತ್ತದೆ. ಆದ್ದರಿಂದ ಸರ್ಕಾರ ದರ ನಿಗದಿ ಮಾಡುವಾಗ ಗ್ರಾಮೀಣ, ಪಟ್ಟಣ ಮತ್ತು ಮಹಾನಗರಗಳಿಗೆ ಪ್ರತ್ಯೇಕ ಆದರೆ ಏಕರೂಪವಾದ ನೀತಿ ಅಳವಡಿಸಬೇಕು. ಇದರಿಂದ ಆಸ್ಪತ್ರೆಗಳಿಗೂ ಗೊಂದಲ ತಪು್ಪವುದರ ಜತೆಗೆ ಜನಸಾಮಾನ್ಯರಲ್ಲೂ ಸ್ಪಷ್ಟತೆ ಮೂಡಲು ಸಾಧ್ಯವಾಗುತ್ತದೆ.

ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ನಿಯಂತ್ರಣದ ಭಾರವನ್ನು ಸರ್ಕಾರದ ಮೇಲೆ ಹಾಕಿ ಸುಮ್ಮನಿರುವಂತಿಲ್ಲ. ಖಾಸಗಿ ಆಸ್ಪತ್ರೆಗಳು ಕೂಡ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ಮತ್ತು ಹೆಚ್ಚು ಬದ್ಧತೆಯಿಂದ ನಿರ್ವಹಿಸುವಂತಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net