ಹಳ್ಳಿಗಳ ಅಭಿವೃದ್ಧಿಗೆ ಯುವಜನತೆ ಶ್ರಮಿಸಲಿ

5BANNU1
ಬನ್ನೂರಿನ ಯಾಚೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಶಿಬಿರಾಧಿಕಾರಿ ಡಾ.ವೈ.ಕೆ. ಭಾಗ್ಯ ಅವರನ್ನು ಅಭಿನಂದಿಸಲಾಯಿತು. ವೈ.ಎನ್. ಶಂಕರೇಗೌಡ, ಶ್ರೀ ನಾದಾನಂದನಾಥ ಸ್ವಾಮೀಜಿ, ವೈ.ಜಿ. ಮಹೇಂದ್ರ, ಕ್ಯಾತೇಗೌಡ, ಇತರರು ಇದ್ದರು.
Published on

ಬನ್ನೂರು : ಹಳ್ಳಿಗಳ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಅಸಾಧ್ಯ. ದೇಶದ ಆಡಳಿತದಲ್ಲಿ ಅತ್ಯಂತ ಚಿಕ್ಕಘಟಕವಾದ ಹಳ್ಳಿಗಳ ಅಭಿವೃದ್ಧಿ ಮಹಾತ್ಮ ಗಾಂಧೀಜಿ ಕನಸಾಗಿದೆ. ಹಳ್ಳಿಗಳ ಅಭಿವೃದ್ಧಿಯಾಗಲು ಯುವಕರು ಜನರಿಗೆ ಅರಿವು ಮೂಡಿಸುವ ಮಹತ್ವದ ಪಾತ್ರ ನಿರ್ವಹಿಸಬೇಕಿದೆ ಎಂದು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ತಿಳಿಸಿದರು.
ಪಟ್ಟಣದ ಯಾಚೇನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದನಾ ಸಹಕಾರ ಸಂಘಗಳ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದರು.

ಇಂದಿಗೂ ಕೆಲವು ಹಳ್ಳಿಗಳಲ್ಲಿ ಮೂಢ ಆಚರಣೆಗಳು ಹಾಸುಹೊಕ್ಕಾಗಿದ್ದು, ಅವುಗಳ ನಿರ್ಮೂಲನೆ ಮಾಡಲು ವಿದ್ಯಾವಂತರಿಂದ ಮಾತ್ರ ಸಾಧ್ಯ. ಯುವಕ ಯುವತಿಯರು ಓದಿದ ನಂತರ ಕೆಲಸಕ್ಕಾಗಿ ನಗರಗಳತ್ತ ಹೋಗುವುದು ಸಹಜವಾದರೂ ತಾನು ಬೆಳೆದ ಊರಿನ ಋಣ ತೀರಿಸಲು ಹಳ್ಳಿಯ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.

ಗ್ರಾಮಗಳ ನೈರ್ಮಲ್ಯ, ಪರಿಸರ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ, ಚರಂಡಿಗಳ ವ್ಯವಸ್ಥೆ, ರಕ್ತದಾನ ಮೊದಲಾದ ಕಾರ್ಯಕ್ರಮಗಳ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ಊರಿನ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮಕೃಷ್ಣ ಸೇವಾ ಕೇಂದ್ರದ ಶ್ರೀ ನಾದಾನಂದನಾಥ ಸ್ವಾಮೀಜಿ ಮಾತನಾಡಿ, ಶಿಕ್ಷಣದ ಜತೆಗೆ ಸಹಪಠ್ಯ ಚಟುವಟಿಕೆಗಳ ಮೂಲಕ ಹಳ್ಳಿಗಳ ಬದುಕಿನ ಬಗೆಗೆ ನೈಜವಾಗಿ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಹಳ್ಳಿಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಶಿಬಿರದಲ್ಲಿ ಕಲಿತ ವಿದ್ಯೆಯನ್ನು ತಮ್ಮ ಬದುಕಿಗೆ ಅಳವಡಿಸಿಕೊಂಡು ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುವಂತೆ ಕರೆನೀಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಡಾ. ವೈ.ಕೆ. ಭಾಗ್ಯ ಅವರನ್ನು ವೈ.ಎನ್. ಶಂಕರೇಗೌಡ ಸನ್ಮಾನಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್. ಸೀಗನಾಯಕ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಗಾಯತ್ರಿ ಸ್ವಾಮಿಗೌಡ, ಶ್ರೀನಿವಾಸ್‌ಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಎ. ಪುಟ್ಟರಾಜು, ವೈ.ಎನ್. ನಾಗೇಶ್, ಸೋಮಶೇಖರ್, ಎಂ.ಎಸ್. ಮಹದೇವ, ಹೀನಾ ಕೌಸರ್, ಕಿಶೋರ್‌ಕುಮಾರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ವೈ.ಕೆ. ಕ್ಯಾತೇಗೌಡ, ಕಮಲಾ, ಪ್ರಾಧ್ಯಾಪಕಿ ಜಯಂತಿ, ವೈ.ಜಿ. ಮಹೇಂದ್ರ, ವೈ.ಎಸ್. ಶೇಖರ್, ವೈ.ಎನ್. ಶಿವಕುಮಾರ್, ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net