ಸದೃಢ ದೇಶ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ

15 HANUR 2
ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯ ಮುಂಭಾಗ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಎ.ಈ. ರಘು, ಚಂದ್ರಶೇಖರ್, ಕೆ.ವಿ. ಮಾದೇಶ್ ಇತರರು ಇದ್ದರು.
Published on

 ಹನೂರು : ಭ್ರಷ್ಟಚಾರಮುಕ್ತ ಸಮಾಜ ನಿರ್ಮಾಣ ಮಾಡುವುದರ ಮೂಲಕ ಸದೃಢ ದೇಶವನ್ನು ಕಟ್ಟಲು ಯುವಪೀಳಿಗೆ ಮುಂದಾಗಬೇಕು ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಲಹೆ ನೀಡಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದ ಮುಂಭಾಗದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶುಕ್ರವಾರ ಸಾವಿರಾರು ಭಕ್ತರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ದೇಶದ ಸ್ವಾತಂತ್ರಕ್ಕಾಗಿ ಮಹಾತ್ಮಗಾಂಧೀಜಿ ಸೇರಿದಂತೆ ಹಲವು ಮಹಾನ್ ನಾಯಕರು ತಮ್ಮ ಜೀವದ ಹಂಗನ್ನು ತೊರೆದು ಹೋರಾಟ ನಡೆಸಿದ್ದಾರೆ. ಹಾಗಾಗಿ ಇವರ ಆದರ್ಶ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಗಾಂಧೀಜಿ ಅವರು ಉತ್ತಮ ಸಮಾಜದ ಕನಸು ಕಂಡಿದ್ದು, ಅಹಿಂಸಾ ಮಾರ್ಗವನ್ನು ಅನುಸರಿಸಿದ್ದರು. ಸ್ವಚ್ಛತೆಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಆದ್ದರಿಂದ ಇವರ ಕನಸನ್ನು ನನಸಾಗಿಸಬೇಕಾದರೆ ಪ್ರತಿಯೊಬ್ಬರೂ ಪರಿಸರವನ್ನು ರಕ್ಷಿಸುವುದರ ಜತೆಗೆ ಸ್ವಚ್ಛತೆ ಕಾಪಾಡಬೇಕಿದೆ. ಜತೆಗೆ ಭ್ರಷ್ಟಾಚಾರಮುಕ್ತ ಸಮಾಜಕ್ಕೆ ಪಣತೊಡಬೇಕು. ಇದರಿಂದ ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.

ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು:

ಇದೇ ವೇಳೆ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಮಾತನಾಡಿ, ಸುದೀರ್ಘ ಇತಿಹಾಸವನ್ನು ಹೊಂದಿರುವ ಭಾರತ ದೇಶ ಸ್ವಾತಂತ್ರ ಹೋರಾಟಗಾರರು, ದಾರ್ಶನಿಕರು, ಸಮಾಜ ಸುಧಾರಕರು ಹಾಗೂ ಇನ್ನಿತರ ಮಹಾನ್ ನಾಯಕರನ್ನು ಹೊಂದಿರುವ ನೆಲೆಬೀಡಾಗಿದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಹಾಗೆಯೇ ದೇಶವು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಈ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ. ಆದ್ದರಿಂದ ಯುವ ಜನತೆ ಈ ಬಗ್ಗೆ ಮನದಟ್ಟು ಮಾಡಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.

ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಮಹದೇವಸ್ವಾಮಿ, ಕೆ.ವಿ ಮಾದೇಶ್ ಹಾಗೂ ಪ್ರಾಧಿಕಾರದ ನೌಕರರು, ಭಕ್ತರು ಇದ್ದರು.

ಸಾಲೂರು ಮಠದಲ್ಲೂ ಆಚರಣೆ : ಇದಕ್ಕೂ ಮುನ್ನ ಸಾಲೂರು ಬೃಹನ್ಮಠದ ಆವರಣದಲ್ಲೂ ಶ್ರೀಗಳು ಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ 79ನೇ ಸ್ವಾತಂತ್ರೋತ್ಸವವನ್ನು ಆಚರಿಸಿದರು. ಈ ವೇಳೆ ನೆರೆದಿದ್ದ ಸಾಲೂರು ಮಠದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಭಕ್ತರಿಗೆ ಆಶೀರ್ವಚನ ನೀಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸಿಎಫ್ ಮನೋಹರ್ ಸ್ವಪ್ನಿಲ್ ಅಹಿರೆ, ಮುಖ್ಯ ಶಿಕ್ಷಕರಾದ ಎಚ್.ಎನ್. ಶಿವಕುಮಾರ್, ಕೆಂಪಸಿದ್ದು, ಮಾಲಮಣಿ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net