

ಶಿವಮೊಗ್ಗ: ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿರಬೇಕು. ಹೊಸ ಬದಲಾವಣೆಗೆ ಕಾರಣರಾಗಬೇಕು. ಬೇರೆಯವರಿಗೆ ಮಾರ್ಗದರ್ಶಕರಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್‌ಕುಮಾರ್ ತಿಳಿಸಿದರು.
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಹಾಗೂ ವ್ಯಸನಮುಕ್ತ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ. ವ್ಯಸನಮುಕ್ತ ಜಿಲ್ಲೆಯನ್ನಾಗಿಸಲು ವಿದ್ಯಾರ್ಥಿಗಳು ಪಣತೊಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿವಿ ಕುಲಸಚಿವ ಡಾ. ಎಸ್.ಎಂ.ಗೋಪಿನಾಥ್, ಯುವಕರು ದೇಶಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಪಾಠ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕೊಂದು ಪೂರಕ ಮತ್ತು ಪ್ರೇರಕವಾಗಿವೆ ಎಂದು ತಿಳಿಸಿದರು.
ರಾಷ್ಟ್ರೀಯ ಕುಸ್ತಿಪಟು ಗೋಪವ್ವ ಮಂಜುನಾಥ್ ಕೊಡ್ಕಿ, ಪ್ರಾಚಾರ್ಯ ಡಾ. ಸಯ್ಯದ್ ಸನಾವುಲ್ಲಾ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್, ಕ್ರೀಡಾ ಸಂಚಾಲಕ ಡಾ. ಕೆ.ಎನ್.ಮಹಾದೇವ ಸ್ವಾಮಿ, ಶಿವಮೊಗ್ಗ ಉಪವಿಭಾಗಾಧಿಕಾರಿ ಜಿ.ಎಚ್.ಸತ್ಯನಾರಾಯಣ, ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ಶಶಿರೇಖಾ ಇತರರಿದ್ದರು.