ಯುವಜನರು ನೈಜ ಇತಿಹಾಸ ತಿಳಿದುಕೊಳ್ಳಲಿ

sor panju
ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಸೊರಬದಲ್ಲಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ಸತೀಶ್ ಪೂಜಾರಿ, ಡಾ. ಜ್ಞಾನೇಶ್, ಲೋಕೇಶ್, ನಾಗರಾಜ ಆಚಾರ್ ಇತರರಿದ್ದರು.
Published on

ಸೊರಬ: ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಸೋಮವಾರ ರಾತ್ರಿ ಅಖಂಡ ಭಾರತ ಸಂಕಲ್ಪ ದಿನದ ನಿಮಿತ್ತ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪಂಜಿನ ಮೆರವಣಿಗೆಗೆ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ನಂತರ ಮುಖ್ಯರಸ್ತೆ ಮಾರ್ಗವಾಗಿ ಶ್ರೀ ರಂಗನಾಥ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು.

ಹಿಂದು ಜಾಗರಣಾ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಸತೀಶ್ ಪೂಜಾರಿ ದಾವಣಗೆರೆ ಮಾತನಾಡಿ, ಅಖಂಡ ಭಾರತ ನಿರ್ಮಾಣಕ್ಕೆ ಹಿಂದುಗಳು ಜಾಗೃತರಾಗಬೇಕಿದೆ. ಕೇವಲ ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರೃ ದೊರೆಯಲಿಲ್ಲ. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿ ಸಾವಿರಾರು ಕ್ರಾಂತಿಕಾರಿಗಳ ತ್ಯಾಗ, ಬಲಿದಾನದಿಂದ ಸ್ವಾತಂತ್ರೃ ದೊರೆತಿದೆ ಎಂದರು.

ಪ್ರಸ್ತುತ ಯುವ ಜನತೆಗೆ ದೇಶದ ನೈಜ ಇತಿಹಾಸವನ್ನು ತಿಳಿಸುವ ಕಾರ್ಯವಾಗಬೇಕಿದೆ. ದೇಶದೊಳಗಿನ ಮತಾಂಧರ, ಭಯೋತ್ಪಾದಕರ ದಾಳಿಯನ್ನು ಎದುರಿಸಲು ಯಾವುದೇ ಹೋರಾಟಗಳಿಗೂ ಯುವ ಸಮೂಹ ಸಿದ್ಧರಾಗಬೇಕು. ಆಪರೇಶನ್ ಸಿಂಧೂರ ಮತ್ತು ಆಪರೇಶನ್ ಮಹಾದೇವ ಯಶಸ್ವಿಗೊಳಿಸಿದ ದೇಶದ ದಿಟ್ಟ ಸೈನಿಕರಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಮುಖಂಡ ಡಾ. ಎಚ್.ಇ.ಜ್ಞಾನೇಶ್ ಮಾತನಾಡಿ, ಸ್ವಾತಂತ್ರೃಕ್ಕೂ ಮೊದಲು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಅಖಂಡ ಭಾರತದ ಭಾಗವೇ ಆಗಿದ್ದವು. ಕೆಲವರ ಸ್ವಾರ್ಥ ಸಾಧನೆಗಾಗಿ ಅಖಂಡವಾಗಿದ್ದ ಭಾರತ ಸ್ವಾತಂತ್ರೃ ದೊರೆಯುತ್ತಿದ್ದಂತೆ ತ್ರಿಖಂಡವಾಗಿದ್ದು ದುರ್ದೈವ. ಹಿಂದು ಧರ್ಮದ ಬೇರು ಭದ್ರವಾಗಿದೆ. ವಿಭಜನೆಯಾಗಿರುವ ಅಖಂಡ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕಿದೆ ಎಂದರು.

ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಂಜು ಹಾಗೂ ಕೇಸರಿ ಧ್ವಜ ಹಿಡಿದು ಜೈಕಾರ ಹಾಕುತ್ತ ಸಾಗಿದರು. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹಿಂಜಾವೇ ಜಿಲ್ಲಾ ಸಹ ಸಂಯೋಜಕ ಲೋಕೇಶ್, ತಾಲೂಕು ಸಂಯೋಜಕ ನಾಗರಾಜ ಆಚಾರ್, ಪ್ರಮುಖರಾದ ರಂಗನಾಥ ಮೊಗವೀರ್, ರಾಘು ಗಜಮುಖ, ರಾಘು ಆಚಾರ್, ರಾಘವೇಂದ್ರ ಮಡಿವಾಳ್, ಸ್ವರೂಪ್, ಸಚಿನ್ ಗೌಡ, ಪುನೀತ್, ಅಭಿಷೇಕ್, ಶರತ್, ಮುಖಂಡರಾದ ಪಾಣಿ ರಾಜಪ್ಪ, ನಾಗರಾಜ ಗುತ್ತಿ, ಜಾನಕಪ್ಪ ಒಡೆಯರ್, ಶಿವಕುಮಾರ್, ಎಂ.ಎಸ್.ಕಾಳಿಂಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net