ಯುವಜನರು ಕಾಫಿ ಕೃಷಿಯಲ್ಲಿ ತೊಡಗಿಕೊಳ್ಳಲಿ

03bhr 1 (1)
Published on

ಬಾಳೆಹೊನ್ನೂರು: ವಿಶ್ವದಲ್ಲಿ ಕಾಫಿ ಉದ್ಯಮಕ್ಕಿಂತ ಉತ್ತಮವಾದದ್ದು ಬೇರೊಂದಿಲ್ಲ. ಇಂದಿನ ಯುವ ಜನತೆ ಕಾಫಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರಬೇಕು ಎಂದು ಕೇಂದ್ರೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜಿ.ದಿನೇಶ್ ದೇವವೃಂದ ಹೇಳಿದರು.
ನಾರಾಯಣಗುರು ಸಮುದಾಯ ಭವನದಲ್ಲಿ ಇ-ಕಾಮ್ ಕಾಫಿ ಕಮಾಡಿಟೀಸ್ ಇಂಡಿಯಾ ಸಂಸ್ಥೆ ಹಾಗೂ ಭೈರವಿ ಒಕ್ಕಲಿಗರ ಮಹಿಳಾ ವೇದಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ ರೋಬಸ್ಟಾ ಕಾಫಿ ಬೆಳೆಗಾರರಿಗೆ ಮಾಹಿತಿ ಶಿಬಿರ, ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ರೋಬಸ್ಟಾ ಕಾಫಿಗೆ ಇರುವ ಬೆಲೆ ಬೇರೆಲ್ಲಿಯೂ ಇಲ್ಲ. ಇದರ ಗುಣಮಟ್ಟ ನಿರ್ವಹಣೆ ಮಾಡಿದರೆ ಬೆಳೆಗಾರರಿಗೆ ಉತ್ತಮ ಬೆಲೆ ಲಭಿಸಲಿದೆ. ಉತ್ಕೃಷ್ಟ ಗುಣಮಟ್ಟ ಕಾಪಾಡಿಕೊಂಡರೆ ಭಾರತೀಯ ಕಾಫಿ ಹಿಂದಿಕ್ಕಲು ಯಾರಿಗೂ ಸಾಧ್ಯವಿಲ್ಲ. ತೋಟಗಳಲ್ಲಿ ಪ್ರಾಣಿ, ಪಕ್ಷಿ, ಗಿಡಮರಗಳನ್ನು ಕಾಪಾಡಿಕೊಂಡು ಕಾಫಿಯನ್ನು ನಾವು ಬೆಳೆಯಬೇಕಿದೆ ಎಂದರು.
ಭಾರತದಲ್ಲಿ ಪ್ರಸ್ತುತ ಕಾಫಿಯ ಉತ್ಪಾದನೆ 3.25 ಲಕ್ಷ ಟನ್ ಇದ್ದು, ಇದನ್ನು 6 ಲಕ್ಷ ಟನ್‌ಗೆ ಹೆಚ್ಚಿಸುವುದು ನಮ್ಮ ಉದ್ದೇಶ. ಇತ್ತೀಚಿನ ದಿನಗಳಲ್ಲಿ ನಾವು ಕಾಫಿ ತೋಟಗಳನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದೇವೆ. ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಸ್ಥೆಯಿಂದ ತಂತ್ರಜ್ಞಾನ ಕಲಿತುಕೊಂಡು ಹೇಗಿ ವಿಯೆಟ್ನಾಮ್‌ನಲ್ಲಿ ವಿಶ್ವದಲ್ಲಿ ನಂ.1 ಕಾಫಿಯನ್ನು ಬೆಳೆಯುತ್ತಿದ್ದಾರೆ ಎಂದರು.
ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಗೆ ಮುಂದಿನ ವರ್ಷ ಶತಮಾನೋತ್ಸವದ ವರ್ಷವಾಗಿದ್ದು, ಈ ವೇಳೆಗೆ ಸಂಸ್ಥೆಯಲ್ಲಿ ಹಲವು ಬದಲಾವಣೆ ತರಲು ಉದ್ದೇಶಿಸಲಾಗಿದೆ. 2025ರ ಅಕ್ಟೋಬರ್‌ನಲ್ಲಿ ಮೂರು ದಿನಗಳ ಕಾಲ ಸತತವಾಗಿ ಕಾಫಿ ಬೆಳೆಗಾರರಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. ಕಾಫಿ ಮಂಡಳಿಯಲ್ಲಿ ಬೆಳೆಗಾರರಿಗಾಗಿ ವಿವಿಧ ಪ್ರಯೋಗಳನ್ನು ನಡೆಸುತ್ತಿದ್ದು, ಕಾಫಿ ಉದ್ಯಮವನ್ನು ಉನ್ನತ ದಿಕ್ಕಿಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ಕಾರ್ಯ ಯೋಜನೆ ಹಮ್ಮಿಕೊಳ್ಳಲಾಗಿದೆ.
ಕಾಫಿ ಬೆಳೆಗಾರರಿಗೆ ವಿವಿಧ ಅಭಿವೃದ್ಧಿಪಡಿಸಿದ ಕಾಫಿ ತಳಿಗಳ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಭೈರವಿ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಸಿ.ಟಿ.ರವಿ, ಕಾಫಿ ಮಂಡಳಿ ಸದಸ್ಯರಾದ ದಿವಿನ್‌ರಾಜ್, ಭಾಸ್ಕರ್ ವೆನಿಲ್ಲಾ, ಟಿ.ಎಸ್.ಧರ್ಮೇಶ್, ತಾರಾ, ಬೆಳೆಗಾರರಾದ ಟಿ.ಎಂ.ಉಮೇಶ್, ಎಂ.ಸಿ.ಯೋಗೀಶ್, ಎಂ.ಕೆ.ಸುಂದರೇಶ್, ಎಂ.ಎಸ್.ಜಯಪ್ರಕಾಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net