ರಕ್ತದಾನ ಮಾಡಲು ಯುವಜನತೆ ಮುಂದಾಗಲಿ

blood donation
ಶಿವಮೊಗ್ಗ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ರಕ್ತದಾನದ ಶಿಬಿರದಲ್ಲಿ ಅನಿಲ್‌ಕುಮಾರ್ ಭೂಮರಡ್ಡಿ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ರೇಣುಕಾರಾಧ್ಯ, ಡಾ. ವೈ.ವಿಜಯಕುಮಾರ್, ಧರಣೇಂದ್ರ ದಿನಕರ್, ಜಿ.ವಿಜಯಕುಮಾರ್, ಛಾಯಾ ಭಾಗವಹಿಸಿದ್ದರು.
Published on

ಶಿವಮೊಗ್ಗ: ಆರೋಗ್ಯವಂತ ಯುವಜನರು ರಕ್ತದಾನಕ್ಕೆ ಮುಂದಾಗಬೇಕು. ಜೀವ ಉಳಿಸುವ ಕಾಯಕದಲ್ಲಿ ಕೈಜೋಡಿಸಬೇಕು ಎಂದು ಎಎಸ್‌ಪಿ ಅನಿಲ್‌ಕುಮಾರ್ ಭೂಮರಡ್ಡಿ ಹೇಳಿದರು.

ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಟರಿ ಜ್ಯುಬಿಲಿ, ಸ್ವಯಂಪ್ರೇರಿತ ರಕ್ತದಾನಿಗಳ ಸಂಸ್ಥೆಯಿಂದ ಶುಕ್ರವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಯುವಕರು ಆರೋಗ್ಯಕರ ಜೀವನ ನಡೆಸಬೇಕು. ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಆರ್ಥಿಕವಾಗಿ ಸದೃಢರಾಗಿ ದೇಶದ ಆಸ್ತಿಯಾಗಬೇಕು ಎಂದು ತಿಳಿಸಿದರು.
ಶೇ.95ರಷ್ಟು ಅಪಘಾತ ಯುವಜನರ ಅಜಾಗರೂಕತೆಯಿಂದ ಉಂಟಾಗುತ್ತದೆ ಎಂದು ಅಂಕಿಅಂಶಗಳೇ ತಿಳಿಸುತ್ತವೆ. ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ನಗರದಲ್ಲಿ ಪ್ರತಿದಿನ 5-6 ಅಪಘಾತವಾಗುತ್ತಿದೆ. ತಾಳ್ಮೆಯಿಂದ ವಾಹನ ಚಲಾಯಿಸಿದರೆ ಅಪಘಾತ ತಡೆಗಟ್ಟಬಹುದು ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ರಕ್ತದಾನಕ್ಕೆ ಮೊದಲಿನಿಂದಲೂ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದೇವೆ. 40 ಬಾರಿ ರಕ್ತದಾನ ಮಾಡಿರುವ ತೃಪ್ತಿ ಇದೆ. ರಕ್ತದಾನ ಪುಣ್ಯದ ಕೆಲಸ ಎಂದು ಹೇಳಿದರು.
ಶಿಬಿರದಲ್ಲಿ 158 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಜೆಎನ್‌ಎನ್‌ಸಿ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ರೋಟರಿ ಜ್ಯುಬಿಲಿ ಅಧ್ಯಕ್ಷ ರೇಣುಕಾರಾಧ್ಯ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಸ್ವಯಂಪ್ರೇರಿತ ರಕ್ತದಾನಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಧರಣೇಂದ್ರ ದಿನಕರ್, ಪ್ರಮುಖರಾದ ಛಾಯಾ, ರೂಪಾ ಪುಣ್ಯಕೋಟಿ, ಅರುಣ್‌ಕುಮಾರ್, ಆನಂದರಾಜ್, ಬಸವರಾಜ್, ಗಿರೀಶ್, ವಾಗೇಶ್, ಸುರೇಶ, ಡಾ. ದಿನಕರ್, ಬಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net