ಕ್ರಿಯಾಶೀಲ ಕೌಶಲಗಳೊಂದಿಗೆ ಯುವಕರು ಸದೃಢವಾಗಲಿ

vtu
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನೆ ಸಂದರ್ಭದಲ್ಲಿ ಸದೃಢ-2.0 ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಡಾ. ವಿದ್ಯಾಶಂಕರ್, ಜಿ.ಎಸ್.ನಾರಾಯಣ ರಾವ್, ಎಸ್.ಡಿ.ಈಶನ್, ಎಸ್.ಎನ್.ನಾಗರಾಜ, ಡಾ. ವೈ.ವಿಜಯಕುಮಾರ್ ಇತರರಿದ್ದರು.
Published on

ಶಿವಮೊಗ್ಗ: ಯುವ ಸಮೂಹ ಕ್ರೀಡೆ, ಸಾಂಸ್ಕೃತಿಕ ನೆಲಗಟ್ಟಿನಿಂದ ಪ್ರೇರಣೆ ಪಡೆದು ಕ್ರಿಯಾಶೀಲ ಕೌಶಲಗಳೊಂದಿಗೆ ಸದೃಢರಾಗಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ್ ಹೇಳಿದರು.

ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ 26ನೇ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ವಿಟಿಯು ಮೌಲ್ಯಾಧಾರಿತ ತಾಂತ್ರಿಕ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿ ಕೇಂದ್ರಿತವಾಗಿ ಕೌಶಲ, ಕ್ರೀಡಾತ್ಮಕ ಮನೋಭಾವ ಬೆಳೆಸಲು ಪ್ರೇರಣೆಯಾಗಿದೆ. 20 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇನ್ಫೋಸಿಸ್ ಕಂಪನಿ ಜತೆಗೂಡಿ ಬೂಟ್ ಕ್ಯಾಂಪಸ್ ಡ್ರೈವ್ ನಡೆಸಿದಾಗ 4 ಸಾವಿರ ವಿದ್ಯಾರ್ಥಿಗಳಲ್ಲಿ 385 ವಿದ್ಯಾರ್ಥಿಗಳು ಮಾತ್ರ ನೇಮಕಾತಿ ಅವಕಾಶ ಪಡೆದಿದ್ದರು. ಬದುಕಿನ ಉನ್ನತಿಗೆ ಶಿಕ್ಷಣದ ಜತೆಗೆ ಕ್ರಿಯಾಶೀಲ ಕೌಶಲಗಳು ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.

ಬದುಕಿನಲ್ಲಿ ಸದೃಢವಾಗಿರಲು ಕ್ರೀಡೆ ಸಹಕಾರಿ. ಇದರಿಂದ ನಮ್ಮ ಮನಸ್ಸು ವಿಕಸನಗೊಳ್ಳುತ್ತದೆ. ಇಂದಿನ ವಿದ್ಯಾರ್ಥಿಗಳಲ್ಲಿ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುವ ಕೆಟ್ಟ ಅಭ್ಯಾಸವಿದೆ. ಸ್ಪರ್ಧೆ ಎಂಬುದು ಬದುಕಿನ ನಿರಂತರ ಪಕ್ರಿಯೆಯಾಗಿದ್ದು, ಅಂತಹ ಸವಾಲುಗಳನ್ನು ಕೌಶಲಪೂರ್ಣವಾಗಿ ಎದುರಿಸಬೆಕು ಎಂದರು.

ಇದೇ ವೇಳೆ ಸದೃಢ-2.0 ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ಪ್ರಾಚಾರ್ಯ ಡಾ.ವೈ.ವಿಜಯಕುಮಾರ್, ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಎಸ್.ಡಿ.ಈಶನ್, ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪಿ.ವಿ.ಕಡಗದಕೈ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎ.ವಿ.ಚೇತನ್ ಉಪಸ್ಥಿತರಿದ್ದರು.

ರಾಜ್ಯದ 150 ವಿವಿಧ ಇಂಜಿನಿಯರಿಂಗ್ ಕಾಲೇಜಿನಿಂದ ಆಗಮಿಸಿದ್ದ ತಂಡಗಳ ಕ್ರೀಡಾಪಟುಗಳು ಆಕರ್ಷಕ ಪಥಸಂಚಲನ ನಡೆಸಿದರು. ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಟೆಕ್ನಾಲಜಿ ಕಾಲೇಜು, ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್, ಪುತ್ತೂರಿನ ವಿವೇಕಾನಂದರ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಅತ್ಯುತ್ತಮ ಪಥಸಂಚಲನ ಪ್ರಶಸ್ತಿಗೆ ಪಾತ್ರವಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net