

ಮಳವಳ್ಳಿ: ಸಾವಿರಾರು ವರ್ಷಗಳ ಹಿನ್ನೆಲೆ ಇರುವ ನಾಡಿನ ಸಂಸ್ಕೃತಿ ಹಾಗೂ ಕನ್ನಡ ಭಾಷೆಯ ಇತಿಹಾಸವನ್ನು ಯುವ ಜನರು ಅರಿತುಕೊಂಡು ನಾಡು-ನುಡಿಯ ಬಗ್ಗೆ ಸ್ವಾಭಿಮಾನ ಮೈಗೂಡಿಸಿಕೊಳ್ಳಬೇಕೆಂದು ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಹೇಳಿದರು.
ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸೌಹಾರ್ದ ನಾಗರಿಕ ವೇದಿಕೆ ಹಾಗೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಂಡ್ಯ ನಗರದಲ್ಲಿ ಡಿ.21ರಿಂದ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡದ ಇತಿಹಾಸ ಹಾಗೂ ಕವಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಇತ್ತೀಚಿನ ಕಾಲಮಾನದ ಶಿಕ್ಷಣ ವ್ಯವಸ್ಥೆಯಲ್ಲಿನ ಬಹಳಷ್ಟು ಶಿಕ್ಷಣ ಸಂಸ್ಥೆಗಳು ಆಂಗ್ಲಭಾಷೆ ಕಲಿಕೆಗೆ ಒತ್ತು ನೀಡುತ್ತಿರುವುದು ಬೇಸರ ಸಂಗತಿಯಾಗಿದೆ ಎಂದು ತಿಳಿಸಿದರು.
ವಿಜ್ಞಾನ, ತಂತ್ರಜ್ಞಾನ ತಿಳಿಯಲು ಬೇಕಿರುವ ಭಾಷೆಗಳಲ್ಲಿ ಕಲಿಸುವುದರಲ್ಲಿ ತಪ್ಪಿಲ್ಲ. ಅದರ ಜತೆಗೆ ನಾಡಿನ ಮಾತೃಭಾಷೆಗಿರುವ ಹಿರಿತನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಆ ಮೂಲಕ ನಾಡಭಾಷೆಯ ಮೇಲೆ ಬಾಲ್ಯದಲ್ಲೇ ಮಕ್ಕಳಲ್ಲಿ ಆತ್ಮಗೌರವ ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಜಾಗೃತಿ ಮೂಡಿಸುವ ಜವಾಬ್ದಾರಿ ನಿರ್ವಹಿಸಬೇಕೆಂದು ಸಲಹೆ ನೀಡಿದರು. ಇಂತಹ ಯಾವುದೇ ಕಟ್ಟುಪಾಡಿಲ್ಲದೆ ಗುಣಮಟ್ಟದ ಶಿಕ್ಷಣ ದೊರೆಯುವುದು ಸರ್ಕಾರಿ ಶಾಲೆಗಳಲ್ಲಿ ಮಾತ್ರ. ನಾವೆಲ್ಲ ಸರ್ಕಾರಿ ಶಾಲೆಗಳಲ್ಲೇ ಶಿಕ್ಷಣ ಪಡೆದಿದ್ದೇವೆ. ಯಾವುದೋ ಸಣ್ಣಪುಟ್ಟ ಲೋಪಗಳನ್ನು ಮುಂದಿಟ್ಟುಕೊಂಡು ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮಾಡುವುದು ಸರಿಯಲ್ಲ. ಪಾಲಕರು ತಮ್ಮ ಮಕ್ಕಳನ್ನು ದಾಖಲಿಸುವುದರ ಜತೆಗೆ ಸರ್ಕಾರಿ ಶಾಲೆಗಳ ಏಳ್ಗೆಗೆ ಸಹಕಾರಿಯಾಗಬೇಕೆಂದು ಮನವಿ ಮಾಡಿದರು.
ನಾಡಿನ ಭಾಷೆ ಹಾಗೂ ಸಂಸ್ಕೃತಿಯ ಕೊಂಡಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಜಾಗೃತಿಗೊಳಿಸಲು ವಿಜಯವಾಣಿ ಪತ್ರಿಕೆ ಮಾಧ್ಯಮ ಸಹಯೋಗ ನೀಡುತ್ತಿರುವುದು ಸ್ಮರಣೀಯ ಕೆಲಸ ಎಂದು ಪ್ರಶಂಸಿಸಿದರು. ಡಿ.21ರಿಂದ ಮಂಡ್ಯ ನಗರದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಡಹಬ್ಬದಂತೆ ಆಚರಿಸಲು ಎಲ್ಲರೂ ಸಮ್ಮೇಳನದಲ್ಲಿ ಭಾಗಿಯಾಗುವಂತೆ ಕರೆ ನೀಡಿದರು.
ವಿದ್ಯಾರ್ಥಿಗಳಿಗೆ ಕನ್ನಡ ಕವಿಗಳು ಹಾಗೂ ದಾರ್ಶನಿಕರ ಬಗ್ಗೆ ರಸಪ್ರಶ್ನೆ, ಕನ್ನಡದ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊದಲ ಮೂರು ಆಯಾ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸೌಹಾರ್ದ ನಾಗರಿಕ ವೇದಿಕೆ ಸದಸ್ಯರಾದ ಆನಂದ್, ಶ್ರೀಕಂಠಸ್ವಾಮಿ, ಡಾ.ಗಿರೀಶ್, ಮುದ್ದುಮಲ್ಲು , ರೇಖಾ, ಪವಿತ್ರಾ, ಆಶಾ, ಶಾಲೆ ಮುಖ್ಯ ಶಿಕ್ಷಕ ನಾಗೇಂದ್ರ ಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಮುಖಂಡರಾದ ಗಜೇಂದ್ರ, ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.