

ಶಿವಮೊಗ್ಗ: ಸರ್ಕಾರಿ ಕಚೇರಿಗಳಲ್ಲಿ ಲಂಚ ಇಲ್ಲದೆ ಕೆಲಸ ಆಗುತ್ತಿಲ್ಲ. ಸಣ್ಣಪುಟ್ಟ ಕೆಲಸಗಳಿದ್ದರೂ ಕಾಸು ಕೊಡಲೇಬೇಕು. ಇಲ್ಲದಿದ್ದರೆ ಕಡತಗಳು ವಿಲೇವಾರಿ ಆಗುವುದೇ ಇಲ್ಲ. ಹಾಗಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ರೀತಿ ಮಾದರಿ ಕೆಲಸ ಮಾಡಿ ಲೋಕಾಯುಕ್ತ ಅಧಿಕಾರಿಗಳು ಭಯ ಹುಟ್ಟಿಸಬೇಕು.
ಇದು ಶಿವಮೊಗ್ಗ ತಾಪಂ ಸಭಾಂಗಣದಲ್ಲಿ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕುಂದುಕೊರತೆ ಸ್ವೀಕಾರ ಸಭೆಯಲ್ಲಿ ಕೇಳಿಬಂದ ಅಹವಾಲು.
ಸರ್ಕಾರಿ ಕಚೇರಿಗಳಿಗೆ ಹೋದರೆ ಕೆಲಸ ಮಾಡಿಕೊಡಲು ಲಂಚ ಕೇಳುತ್ತಾರೆ. ಲಂಚ ಕೇಳಿದರೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಹೇಳಿದರೂ ಸಿಬ್ಬಂದಿ ಉಡಾೆಯಾಗಿ ವರ್ತಿಸುತ್ತಾರೆ. ನಾವು ಚಿಕ್ಕ ಮೀನುಗಳು ಲೋಕಾಯುಕ್ತದಲ್ಲೇ ದೊಡ್ಡ ತಿಮಿಂಗಿಲಗಳಿವೆ ಎಂದು ಲೇವಡಿ ಮಾಡುತ್ತಾರೆ. ಹಾಗಾಗಿ ಲೋಕಾಯುಕ್ತ ಅಧಿಕಾರಿಗಳ ಕಾರ್ಯವೈಖರಿ ಮತ್ತಷ್ಟು ಪರಿಣಾಮಕಾರಿ ಆಗಬೇಕಿದೆ ಎಂದು ಕುಂಸಿ ಗ್ರಾಮದ ಕುಮಾರ್ ಎಂಬುವರು ಮನವಿ ಮಾಡಿದರು.
ಪಿಎಂ ಕಿಸಾನ್ ಯೋಜನೆಯಡಿ ನನಗೆ ಮೂರು ಕಂತು ಹಣ ಬಂದಿದೆ. ಆನಂತರ ಇಲ್ಲಿಯವರೆಗೂ ಹಣ ಬಂದಿಲ್ಲ. ಕೃಷಿ ಇಲಾಖೆಗೆ ಹೋಗಿ ಕೇಳಿದರೆ ಆಧಾರ್ ಕಾರ್ಡ್, ಪಡಿತರ ಚೀಟಿ ಬೇಕೆಂದು ಹೇಳುತ್ತಿದ್ದಾರೆ. ಇಂತಹ ಆದೇಶ ಎಲ್ಲಿದೆ ಎಂದರೆ ಸಬೂಬು ಹೇಳುತ್ತಿದ್ದಾರೆ. ನನಗೆ ಬಾಕಿ ಅಷ್ಟೂ ಕಂತಿನ ಹಣ ಕೊಡಿಸಿ ಎಂದು ಮನವಿ ಮಾಡಿದರು. ತಾಲೂಕು ಕೃಷಿ ಅಧಿಕಾರಿ ಸಮಸ್ಯೆ ಪರಿಹರಿಸಿಕೊಡುವ ಭರವಸೆ ನೀಡಿದರು.
2023ರ ನ.17ರಂದು ಲೋಕಾಯುಕ್ತದಲ್ಲೇ ದೂರು ದಾಖಲಿಸಿದ್ದೇನೆ. ಇದುವರೆಗೂ ಯಾವುದೇ ಕ್ರಮ ಆಗಿಲ್ಲ. ಹೀಗಾದರೆ ಲೋಕಾಯುಕ್ತವನ್ನೂ ನಂಬುವುದು ಹೇಗೆ ಎಂದು ಕುಮಾರ್ ಆಕ್ರೋಶ ಹೊರಹಾಕಿದರು. ಈ ವೇಳೆ ಲೋಕಾಯುಕ್ತ ಅಧಿಕಾರಿ ವೀರಭದ್ರಪ್ಪ ಮಾತನಾಡಿ, ದೂರು ಕೊಟ್ಟ ನಂತರ ತನಿಖೆ ನಡೆಯುತ್ತದೆ. ಸಾಧ್ಯವಾದಷ್ಟೂ ಶೀಘ್ರವಾಗಿ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಯಾರಾದರೂ ಲಂಚ ಕೇಳುತ್ತಿದ್ದರೆ ಅದನ್ನು ರೆಕಾರ್ಡ್ ಮಾಡಿ ದೂರು ಕೊಡಿ. ಸಾಕ್ಷಾಧಾರ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದರು. ಲೋಕಾಯುಕ್ತ ಇನ್ಸ್‌ಪೆಕ್ಟರ್ ಪ್ರಕಾಶ್, ತಾಪಂ ಇಒ ಅವಿನಾಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.