

ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆ ಗ್ರಾಪಂನ ಆಡಳಿತ, ವ್ಯವಹಾರಕ್ಕೆ ಸಂಬಂಧಿಸಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಮುಖಂಡರು, ಕಾರ್ಯಕರ್ತರು ರಿಪ್ಪನ್‌ಪೇಟೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈಗಾಗಲೇ ಎರಡು ಆಡಿಯೋ ತುಣಕುಗಳನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕವಾಗಿ ಪ್ರಸಾರ ಮಾಡಲಾಗಿದೆ. ಅದರಲ್ಲಿರುವ ಸಂಭಾಷಣೆಗಳು ಖಾಸಗಿಯಾಗಿದ್ದರೂ ಗ್ರಾಮ ಪಂಚಾಯಿತಿ ವಿಚಾರಕ್ಕೆ ಸಂಬಂಧಿಸಿದವು. ಒಂದರಲ್ಲಿ ಒಬ್ಬ ವ್ಯಕ್ತಿಯ ಹುಟ್ಟಿನ ಬಗ್ಗೆ ಉಲ್ಲೇಖಿಸಲಾಗಿದೆ. ಇನ್ನೊಂದರಲ್ಲಿ ವ್ಯಕ್ತಿಯನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡುವುದಾಗಿ ಹೇಳಿದ್ದಾರೆ. ಒಬ್ಬ ವ್ಯಕ್ತಿಯನ್ನು ಟೀಕಿಸುವ ಭರದಲ್ಲಿ ಹೆಣ್ಣನ್ನು ಅವಮಾನಿಸುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ, ಕಾಂಗ್ರೆಸ್ ಘಟಕದ ಅಧ್ಯಕ್ಷ ಗಣಪತಿ ಈ ಘಟನಾವಳಿಗಳಲ್ಲಿ ಪಾತ್ರದಾರಿ ಎನ್ನಲಾಗಿದೆ. ಈ ಮಾತುಕತೆ ಸಂಪೂರ್ಣವಾಗಿ ಗ್ರಾಪಂ ಆಡಳಿತದೊಳಗಿನ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಇಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದ್ದರಿಂದ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಪ್ರಕರಣದ ನೈತಿಕ ಹೊಣೆ ಹೊತ್ತು ಅಧ್ಯಕ್ಷೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರದ ಬದಲು ಊರಿನ ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಗ್ರಾಮದ ಅಭಿವೃದ್ಧಿಗಾಗಿ ಇಬ್ಬರೂ ಶ್ರಮಿಸಬೇಕು. ಅದನ್ನು ಬಿಟ್ಟು ರಾಜಕಾರಣ, ಭ್ರಷ್ಟಾಚಾರಕ್ಕಾಗಿ ಅಣ್ಣ-ತಂಗಿ ಸಂಬಂಧ ಬೆಸೆಯುವುದಲ್ಲ. ಸಾಗರ ಕ್ಷೇತ್ರದಲ್ಲಿ ಪೊಲೀಸ್, ಾರೆಸ್ಟ್ ಇಲಾಖೆಗಳಿಂದ ಸಾರ್ವಜನಿಕರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ಆರಂಭವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಪಕ್ಷಪಾತಮಾಡದೆ ಅಭಿವೃದ್ಧಿ ಮಾಡಿದರೆ ಎಲ್ಲರಿಗೂ ಒಳಿತು. ಇಲ್ಲವಾದರೆ ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ಮಾಡಲಾಗುವುದು. ಇನ್ನು ಕೆಲವೇ ದಿನಗಳಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಕ್ಷೇತ್ರದಲ್ಲಾಗುತ್ತಿರುವ ಭ್ರಷ್ಟಾಚಾರ ಮತ್ತು ಪಕ್ಷಪಾತ ಧೋರಣೆ ವಿರುದ್ಧ ಅಸೆಂಬ್ಲಿಯವರೆಗೂ ಹೋರಾಟ ಕೊಂಡೊಯ್ಯಲಾಗುವುದು ಎಂದು ಎಚ್ಚರಿಸಿದರು.
ಆಲುವಳ್ಳಿ ವೀರೇಶ, ಮತ್ತಿಮನೆ ಸುಬ್ರಹ್ಮಣ್ಯ, ಆರ್.ಟಿ.ಗೋಪಾಲ, ಪದ್ಮಾ ಸುರೇಶ, ಎನ್.ಸತೀಶ, ಸುರೇಶ ಸಿಂಗ್, ಸುಂದರೇಶ, ಎಂ.ಬಿ.ಮಂಜುನಾಥ, ಮಂಜುಳಾ, ನಾಗರತ್ನಾ, ದಾನಮ್ಮ, ಅಶ್ವಿನಿ, ಪಿ.ರಮೇಶ, ಮಲ್ಲಿಕಾರ್ಜುನ, ವನಮಾಲಾ, ದೀಪಾ, ಲೀಲಾ ಶಂಕರ್, ಸುಧೀಂದ್ರ ಪೂಜಾರಿ ಇತರರಿದ್ದರು.