

ಶಿವಮೊಗ್ಗ: ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಜನಸಂಖ್ಯೆ ಮೂರು ಕೋಟಿಯಿದೆ. ಆದರೆ ಒಗ್ಗಟ್ಟಿಲ್ಲದೆ ನಾವು ಬಲಹೀನರಾಗಿದ್ದೇವೆ. ಹೀಗಾಗಿ ಒಳಪಂಗಡಗಳನ್ನು ಮರೆತು ವೀರಶೈವ ಲಿಂಗಾಯತ ಸಮುದಾಯ ಒಗ್ಗೂಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.
ತಾಲೂಕು ವೀರಶೈವ ಲಿಂಗಾಯತ ಮಹಾಸಭಾದಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆ ಹಾಗೂ ಸಹಕಾರ ಸಂಸ್ಥೆಗಳಿಗೆ ಆಯ್ಕೆಯಾದ ಸಮಾಜದ ಪ್ರಮುಖರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಿ ನಮ್ಮ ಶಕ್ತಿಯನ್ನು ತೋರಿಸಬೇಕಿದೆ ಎಂದರು.
ಎಲ್ಲರೂ ಒಳಪಂಗಡಗಳಿಗೆ ಒತ್ತು ನೀಡಿರುವುದರಿಂದ ಲಿಂಗಾಯತರು ಬಣಜಿಗ, ಪಂಚಮಸಾಲಿ, ಸಾದರು, ಹೂಗಾರ, ಕುಂಬಾರ ಹೀಗೆ ಹಂಚಿ ಹೋಗಿ ಚಿಕ್ಕ ಚಿಕ್ಕ ಮನೆಗಳಂತೆ ಆಗಿದ್ದೇವೆ. ಆದರೆ ನಮ್ಮದು ವೀರಶೈವ ಲಿಂಗಾಯತ ಸಮಾಜವೆಂಬ ದೊಡ್ಡ ಮನೆ. ಇದು ಜಗತ್ತಿನ ಮುಂದೆ ಗೋಚರಿಸಬೇಕೆಂದರೆ ಎಲ್ಲರೂ ವೀರಶೈವ ಲಿಂಗಾಯತ ಎಂಬ ಒಂದೇ ವೇದಿಕೆಯಡಿ ಇರಬೇಕು ಎಂದು ಅಭಿಪ್ರಾಯಪಟ್ಟರು.
ನಾವು ಒಗ್ಗಟ್ಟಾಗಿ ನಿಂತರೆ ಬಲಿಷ್ಠರಾಗುತ್ತೇವೆ. ಆಗ ಯಾವುದೇ ಸರ್ಕಾರ ನಮ್ಮ ಪರವಾಗಿ ನಿಲ್ಲುತ್ತದೆ. ನಮ್ಮ ಬೇಡಿಕೆಗಳಿಗೆ ತಲೆ ಬಾಗುತ್ತದೆ. ಬಲಹೀನ ಸಂಘಟನೆಗೆ ಯಾರೂ ಗೌರವ ಕೊಡುವುದಿಲ್ಲ. ನಮ್ಮ ಸಮಾಜವನ್ನು ನಾವೇ ಬೆಳೆಸಬೇಕು. ಇದನ್ನು ಮೇಲೆತ್ತಲು ಬೇರೆಯವರು ಬರುವುದಿಲ್ಲ. ಸಮಾಜದ ಇಂದಿನ ಹಿರಿಯರು ಮುಂದಿನ ಪೀಳಿಗೆಗೆ ಒಳ್ಳೆಯದನ್ನು ಬಿಟ್ಟುಹೋಗಬೇಕು ಎಂದು ತಿಳಿಸಿದರು.
ಮಹಾಸಭಾದಲ್ಲಿ ಹೊಸಬರಿಗೆ ಹೆಚ್ಚು ಅವಕಾಶ ಸಿಗಲೆಂದು ಅಧ್ಯಕ್ಷ ಸೇರಿದಂತೆ ಪ್ರಮುಖ ಸ್ಥಾನಗಳನ್ನು ಒಬ್ಬರಿಗೆ ಎರಡು ಬಾರಿಗಿಂತ ಹೆಚ್ಚು ನೀಡದಿರಲು ಬೈಲಾದಲ್ಲಿ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಸಂಘಟನೆಯ ಎಲ್ಲ ತಾಲೂಕು ಸಂಘಗಳು ಆರ್ಥಿಕವಾಗಿ ಸಬಲರಾಗಿ ಸಮಾಜದ ಏಳಿಗೆಗೆ ಕೆಲಸ ಮಾಡುವಂತಾಗಬೇಕು. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ನಿದಿ ಸ್ಥಾಪಿಸಬೇಕು. ಸಮಾಜದ ಪ್ರತಿಯೊಬ್ಬರೂ ತಮ್ಮ ದುಡಿಮೆಯ ಶೇ.2ರಷ್ಟನ್ನು ಸಮಾಜಕ್ಕಾಗಿ ದಾನ ನೀಡಬೇಕೆಂದರು.
ನೂರಾರು ಶಿವಶರಣರ ಜಯಂತಿಯನ್ನು ಪ್ರತಿನಿತ್ಯ ಆಚರಿಸುವುದರ ಬದಲಿಗೆ ಬಸವ ಜಯಂತಿಯಂದು ಎಲ್ಲಾ ಶಿವಶರಣರ ಜಯಂತಿಯನ್ನು ಒಟ್ಟಿಗೆ ಆಚರಿಸುವ ಹೊಸ ಪದ್ಧತಿ ಪ್ರಾರಂಭಿಸೋಣ. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಮಾಜ ಬಾಂಧವರು ಪಾಲ್ಗೊಳ್ಳುವಂತಾಗಬೇಕು ಎಂದರು.
ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಆರ್.ಸೋಮನಾಥ್ ಮುಂತಾದವರಿದ್ದರು. ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು.