ತತ್ವ-ಆದರ್ಶಗಳ ಪಾಲನೆಯೇ ಮೂಲ ಆಶಯವಾಗಲಿ

01mdk05
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬಸವನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಶ್ರೀ ಗುರುಚನ್ನಬಸವ ಶಿವಾಚಾರ್ಯರ ದತ್ತಿ ಕಾರ್ಯಕ್ರಮವನ್ನು ಮಹಾತ್ಮಗಾಂಧಿ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಬಿ.ಲಿಂಗಮೂರ್ತಿ ಉದ್ಘಾಟಿಸಿದರು. ಲೀಲಾಕುಮಾರಿ ತೊಡಿಕಾನ, ಕೆ.ಎಸ್.ಮೂರ್ತಿ, ಶ್ರೀದೇವಿ, ಬಿ.ನಟರಾಜು, ಸತ್ಯ, ಪುಟ್ಟರಾಜು, ಕೆ.ಆರ್.ರಮೇಶ್, ಗಿರೀಶ್ ಇದ್ದರು.
Published on

ಕುಶಾಲನಗರ: ಮನುಷ್ಯನ ನೋವು-ನಲಿವು, ದುಃಖ-ದುಮ್ಮಾನಗಳು ಹಾಗೂ ಆತನ ನಾಶಕ್ಕೆ ಆಸೆಗಳೇ ಕಾರಣವಾಗಿವೆ. ಮನುಷ್ಯ ನೆಮ್ಮದಿಯ ಬದುಕು ಕಟ್ಟಬೇಕಿದ್ದಲ್ಲಿ ಹನ್ನೆರಡನೇ ಶತಮಾನದ ವಚನಕಾರರ ತತ್ವ ಆದರ್ಶಗಳ ಪಾಲನೆಯೇ ಮೂಲ ಆಶಯವಾಗಬೇಕೆಂದು ಕುಶಾಲನಗರದ ಮಹಾತ್ಮಗಾಂಧಿ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಬಿ.ಲಿಂಗಮೂರ್ತಿ ಹೇಳಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬಸವನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಶ್ರೀ ಗುರುಚನ್ನಬಸವ ಶಿವಾಚಾರ್ಯರ ದತ್ತಿ ಕಾರ್ಯಕ್ರಮ ಶರಣ ಸಂಸ್ಕೃತಿ ಪ್ರಸಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ನಡೆ-ನುಡಿಗಳೆರಡನ್ನು ಒಂದಾಗಿಸಿಕೊಂಡು ಎಲ್ಲ ಜಾತಿ ಸಮುದಾಯಗಳ ವಚನಕಾರರನ್ನು ಸೇರಿಸಿ ನಾಡಿಗೆ ಸಾರಿದ ಸಂದೇಶಗಳನ್ನು ನಾವು ಪಾಲಿಸಿದ್ದೇ ಆದಲ್ಲಿ ಜನ ಹಿತ ಹಾಗೂ ಲೋಕ ಹಿತ ಅಗ್ರಪಂಕ್ತಿಯಲ್ಲಿರುತ್ತದೆ ಎಂದು ತಿಳಿಸಿದರು.

ಶರಣ ಸಂಸ್ಕೃತಿ-ಪ್ರಸಾರ ಪ್ರವಚನ ನೀಡಿದ ಸಾಹಿತಿ ಲೀಲಾಕುಮಾರಿ ತೊಡಿಕಾನ, ಮನುಷ್ಯನ ದೇಹವೆಂಬ ಬಂಡಿಯನ್ನು ಓಡಿಸುವ ಪಂಚೇಂದ್ರಿಯಗಳನ್ನು ನಿಗ್ರಹಿಸುವ ಅಥವಾ ಸ್ವಯಂ ನಿಯಂತ್ರಿಸುವ ಶಕ್ತಿ ಮನುಷ್ಯನಿಗಿದ್ದರೆ ಆತನಿಗೆ ನೋವು, ಸಂಕಟಗಳೇ ಇರುವುದಿಲ್ಲ. ಇವನಾರವ ಎನ್ನದೇ ಇವ ನಮ್ಮವನೆಂಬ ಅಭಿಮಾನವನ್ನು ಸರ್ವರೂ ಮನಗಾಣಬೇಕಿದೆ. ಹನ್ನೆರಡನೇ ಶತಮಾನದಲ್ಲಿನ ಸಂಸ್ಕೃತ ಭಾಷೆ ಜನರಿಗೆ ಅರ್ಥವಾಗದಿದ್ದಾಗ ಸರಳ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿ ವಚನಗಳ ಮೂಲಕ ಲೋಕ ಸಂದೇಶ ಸಾರಿದ ಶರಣರ ನುಡಿಗಳು ಸಾರ್ವಕಾಲಿಕವಾಗಿ ಉಳಿಯಲಿವೆ. ಇಂದಿನ ಮಕ್ಕಳು ಬಸವಣ್ಣನವರ ಕಲಬೇಡ ಕೊಲಬೇಡ ಎಂಬ ಒಂದೇ ಒಂದು ವಚನದ ಸಾರವನ್ನರಿತು ಅದರಂತೆ ನಡೆದಲ್ಲಿ ಮನುಷ್ಯನ ಬದುಕು ಸ್ವರ್ಗವಾಗುತ್ತದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀದೇವಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬಿ. ನಟರಾಜು, ಪ್ರಗತಿ ಪರ ಕೃಷಿಕ ಸತ್ಯ, ಶಾಲೆಯ ಸಂಗೀತ ಶಿಕ್ಷಕ ಪುಟ್ಟರಾಜು, ಕನ್ನಡ ಶಿಕ್ಷಕ ಕೆ.ಆರ್. ರಮೇಶ್, ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net