ಪ್ರತಿಭಾನ್ವಿತರನ್ನು ಗೌರವಿಸುವಂತಾಗಲಿ

ಪ್ರತಿಭಾನ್ವಿತರನ್ನು ಗೌರವಿಸುವಂತಾಗಲಿ
Published on

ಕೆ.ಆರ್.ನಗರ: ದೇಶ ಅಭಿವೃದ್ಧಿ ಆಗಬೇಕೆಂದರೆ ಪ್ರತಿಭಾನ್ವಿತ ವ್ಯಕ್ತಿಗಳನ್ನು ಪ್ರೋತ್ಸಾಹಿಸಿ, ಗೌರವಿಸುವ ಕೆಲಸವಾಗಬೇಕೆಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಕೆ.ಆರ್.ನಗರ ತಾಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರ ಸಂಘದಿಂದ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಮತ್ತು ಮತದಾನ ಎಂಬ ಆಯುಧವನ್ನು ನಮ್ಮ ಕೈಯಲ್ಲಿ ಇಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಶಿಕ್ಷಣ, ಸಂಘಟನೆ ಮೂಲಕ ಹೋರಾಟ ಮಾಡಿ ಸಾಧನೆ ಮಾಡಬಹುದು. ನಿಮ್ಮ ಮುಂದೆ ಇರುವ ಸಾಕಷ್ಟು ಅವಕಾಶಗಳನ್ನು ಬಳಸಿಕೊಂಡು ಗುರಿ ತಲುಪಿ ಸಾಧನೆ ಮಾಡಬಹುದು ಎಂದು ಹೇಳಿದರು.

ಪಾಲಕರು ಮಕ್ಕಳಿಗೆ ಒತ್ತಡ ಕೊಡಬೇಡಿ ಅವರಿಗೆ ಇಷ್ಟವಾದ ಆಯ್ಕೆಯ ಮೂಲಕ ಉನ್ನತ ಶಿಕ್ಷಣದ ಅವಕಾಶ ಕೊಡಿ. ಸಾಧನೆ ಯಾರಪ್ಪನ ಸ್ವತ್ತಲ್ಲ ಯಾರು ಬೇಕಾದರೂ ಮಾಡಬಹುದು ಎಂದರು.

ನಾನು ನಿಮ್ಮ ಮುಂದೆ ಶಾಸಕನಾಗಿ ಮಾತನಾಡಲು ಅವಕಾಶ ಸಿಕ್ಕಿರುವುದು ಅಂಬೇಡ್ಕರ್ ಸಂವಿಧಾನದಿಂದ ಮಾತ್ರ. ಸಂವಿಂಧಾನದ ಮೂಲಕ ಮತದಾನದ ಹಕ್ಕನ್ನು ನಮಗೆ ನೀಡಿ ಮತ ಎಂಬ ಆಯುಧವನ್ನು ನಮ್ಮ ಕೈಯಲ್ಲಿ ಇಟ್ಟಿದ್ದಾರೆ. ಸಂವಿಧಾನ ರಚನೆ ಸಂದರ್ಭದಲ್ಲಿ ಇದ್ದ 7 ಜನರಲ್ಲಿ 6 ಜನರು ಹಲವಾರು ಕಾರಣಗಳಿಂದ ರಾಜೀನಾಮೆ ನೀಡುತ್ತಾರೆ. ಬಹಳ ಕಷ್ಟಕರವಾದ ಜವಬ್ದಾರಿ ನಿಭಾಯಿಸಿ ನಾವೆಲ್ಲಾ ನೆಮ್ಮದಿಯ ಬದುಕು ನಡೆಸಲು ಸಂವಿಧಾನದ ಮೂಲಕ ಅವಕಾಶ ನೀಡಿದವರು ಅಂಬೇಡ್ಕರ್ ಎಂದು ಹೇಳಿದರು.

1 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಬೃಹತ್ ಡಿಜಿಟಲ್ ಲೈಬ್ರರಿ ಸ್ಥಾಪಿಸಿ ಎಸ್ಸಿ, ಎಸ್ಟಿ ನೌಕರರ ಸಂಘಕ್ಕೆ ನಿವೇಶನ ನೀಡಿ ಕಟ್ಟಡ ನಿರ್ಮಿಸಿ ಕೊಡುವ ಜತೆಗೆ ತಾಲೂಕಿನಲ್ಲಿ ಐಟಿಐ, ಡಿಪ್ಲೊಮೋ, ನರ್ಸಿಂಗ್ ಕಾಲೇಜುಗಳ ಪ್ರಾರಂಭಕ್ಕೆ ಶ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಗತಿ ಪರ ಚಿಂತಕ ಗೋಪಾಲ್ ಮಾತನಾಡಿ, ಅಂಬೇಡ್ಕರ್ ಜಯಂತಿಯಲ್ಲಿ ದುಂದುವೆಚ್ಚ ಮಾಡುವುದರಿಂದ ಪ್ರಯೋಜನವಿಲ್ಲ. ಆದರೆ, ಪ್ರತಿಭಾ ಪುರಸ್ಕಾರದಂತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಯುವ ಪೀಳಿಗೆಯನ್ನು ಪ್ರೋತ್ಸಾಹಿಸಿ. ವಿದೇಶಗಳಲ್ಲಿ ಅಂಬೇಡ್ಕರ್ ಅವರ ಬಗ್ಗೆ ಗೌರವ ಹೆಚ್ಚಾಗುತ್ತಿದೆ. ಅಮೆರಿಕ ಸೇರಿದಂತೆ ಅನೇಕ ದೇಶಗಳಿಂದ ನಮ್ಮ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿರುವ ಹಲವು ಆರ್ಟಿಕಲ್‌ಗಳನ್ನು ತಮ್ಮ ದೇಶಕ್ಕೆ ಅಳವಡಿಸಿಕೊಂಡಿವೆ ಎಂದರು.

ವೇದಿಕೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ಬುದ್ಧ ಬೆಳಕು ಎಂಬ ನಾಟಕವನ್ನು ಅಭಿನಯಿಸಲಾಯಿತು.

ಕಾರ್ಯಕ್ರಮ ಕುರಿತು ಉರಿಲಿಂಗ ಪೆದ್ದಿ ಮಠದ ಶ್ರೀಜ್ಞಾನ ಪ್ರಕಾಶ ಸ್ವಾಮೀಜಿ ಆರ್ಶೀವಚನ ನೀಡಿದರು. ಪ್ರಗತಿಪರ ಚಿಂತಕ ಮಾಲ್ಗುಡಿ ಮಹದೇವಸ್ವಾಮಿ ಮಾತನಾಡಿದರು. ಡಾ.ಪ್ರೋ.ಶಿವರಾಮು, ಪುರಸಭಾ ಅಧ್ಯಕ್ಷ ಶಿವುನಾಯಕ್, ಮಾಜಿ ಅಧ್ಯಕ್ಷೆ ಗೀತಾಮಹೇಶ್, ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಚಂದ್ರಶೇಖರ್, ಜಿಲ್ಲಾ ಅಧ್ಯಕ್ಷ ಶಿವರಾಮಕೃಷ್ಣ, ತಾಲೂಕು ಅಧ್ಯಕ್ಷ ರಾಮಕೃಷ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜ್, ನಿರ್ದೇಶಕ ಕೆ.ವಿ.ರಮೇಶ್, ಬಿ.ಎಲ್.ಮಹದೇವ್, ಮುಖಂಡರಾದ ಎಚ್.ಎಸ್.ಸ್ವಾಮಿ, ದೊಡ್ಡಯ್ಯ, ಸಿದ್ದಾಪುರಪರಶುರಾಮ್, ಡಾ.ಕೃಷ್ಣ, ರಾಮಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net