

ಸಾಗರ: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಹಿರಿಯ ರೈತ ಮುಖಂಡ ಜಗಜಿತ್ ದಲ್ಲೆವಾಲ ಅವರ ಹೋರಾಟವನ್ನು ಬೆಂಬಲಿಸಿ ಸಂಯುಕ್ತ ಹೋರಾಟ ಕರ್ನಾಟಕ, ರಾಜ್ಯ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಎಸಿ ಕಚೇರಿಗೆ ಮನವಿ ಸಲ್ಲಿಸಿದರು.
ಕೇಂದ್ರದಲ್ಲಿ ರೈತ ವಿರೋಧಿ ಸರ್ಕಾರವಿದೆ. ರೈತರ ಸಮಸ್ಯೆಗಳ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ರೈತರು ಬೇಡಿಕೆ ಈಡೇರಿಕೆಗಾಗಿ ವರ್ಷಗಟ್ಟಲೆ ನಡೆಸಿದ್ದರು. ಆದರೆ ಸರ್ಕಾರ ರೈತರ ಬೇಡಿಕೆ ಈಡೇರಿಸಿಲ್ಲ. ಪದೇಪದೆ ರೈತರ ತಾಳ್ಮೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಅಸಮಾಧಾನ ವ್ಯಕ್ತಪಡಿಸಿದರು.
ದಲ್ಲೆವಾಲ ಅವರು ಅನೇಕ ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದೆ. ಕೇಂದ್ರ ಸರ್ಕಾರ ಅವರ ಆರೋಗ್ಯ ವಿಚಾರಿಸುವ ಕನಿಷ್ಠ ಕಾಳಜಿಯನ್ನೂ ತೋರಿಲ್ಲ. ತಕ್ಷಣ ಅವರ ಆರೋಗ್ಯ ವಿಚಾರಿಸುವ ಜತೆಗೆ ರೈತಪರವಾದ ಬೇಡಿಕೆ ಈಡೇರಿಸಬೇಕು. ರೈತ ಸಂಘಟನೆಗಳ ಹಕ್ಕೊತ್ತಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಎನ್.ಡಿ.ವಸಂತಕುಮಾರ್, ಯು.ಪಿ.ಜೋಸೆಫ್, ಸುಂದರ ಸಿಂಗ್, ಸುರೇಶ್ ಅಂಗಡಿ, ಜಯಲಕ್ಷ್ಮೀ, ರಮೇಶ್ ಐಗಿನಬೈಲು, ಬಂಗಾರಪ್ಪ ಇತರರಿದ್ದರು.