ಸಂಪಾದಕೀಯ | ಗ್ರಾಪಂಗಳ ಬಲ ಹೆಚ್ಚಲಿ

ಗ್ರಾಮ ಪಂಚಾಯಿತಿ
ಗ್ರಾಮ ಪಂಚಾಯಿತಿ
Published on

ಅಭಿವೃದ್ಧಿಯ ಮುಖ್ಯ ಆಶಯ ಸಾಕಾರಗೊಳ್ಳುವುದು ಗ್ರಾಮಗಳ ವಿಕಾಸದಿಂದ. ಅದಕ್ಕಾಗಿಯೇ, ಹಳ್ಳಿಗಳನ್ನು ಈ ರಾಷ್ಟ್ರದ ಆತ್ಮ ಎಂದು ಸಂಬೋಧಿಸಲಾಗಿದೆ. ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ವ್ಯಾಪ್ತಿಯಿಂದ ಹೊರಗಿಟ್ಟರೆ, ಅಭಿವೃದ್ಧಿ ಹೆಸರಲ್ಲಿ ನಡೆಯುವ ಬೇರೆಲ್ಲ ಪ್ರಯತ್ನಗಳು ಫಲ ಕೊಡುವುದಿಲ್ಲ. ಆಡಳಿತ ವೀಕೇಂದ್ರಿಕರಣದ ಆಶಯ ಮತ್ತು ಗ್ರಾಮಗಳ ಅಭಿವೃದ್ಧಿಯ ಉದ್ದೇಶದಿಂದಲೇ ಗ್ರಾಮ ಪಂಚಾಯಿತಿ ವ್ಯವಸ್ಥೆ ರೂಪುಗೊಂಡಿದೆ. ಅಲ್ಲದೆ, ಪ್ರಜಾಪ್ರಭುತ್ವದ ತಳಪಾಯ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಕೆಲವು ವರ್ಷಗಳ ಹಿಂದೆ ಗ್ರಾಪಂಗಳ ಕಾರ್ಯವ್ಯಾಪ್ತಿ ತುಂಬ ಸೀಮಿತವಾಗಿತ್ತು. 

ಈಗ ಸ್ಥಿತಿ ಮೊದಲಿನಂತಿಲ್ಲ. ಅನೇಕ ಹೊಣೆಗಾರಿಕೆಗಳು ಹೆಗಲಿಗೇರಿವೆ, ಕಾರ್ಯವ್ಯಾಪ್ತಿ ವಿಸ್ತಾರಗೊಂಡಿದೆ. ಉತ್ತರದಾಯಿತ್ವ ಸಹ. ಪ್ರಸ್ತುತ, ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳ ಆಡಳಿತ ಬಲಪಡಿಸಲು ಮತ್ತು ಆದಾಯ ಹೆಚ್ಚಿಸಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ಸೋಮವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 238 ಸಾಧಕ ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ವಿತರಿಸಿದ್ದಾರೆ ಮತ್ತು ಇದೇ ಸಂದರ್ಭದಲ್ಲಿ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿದರು. ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯೊಂದಿಗೆ ಭೂ ದಾಖಲೆ ಯೋಜನೆಯೂ ಸೇರಿದೆ. 

ಇ-ಸ್ವತ್ತು 2.0 ತಂತ್ರಾಂಶದಿಂದ ಗ್ರಾಪಂಗಳಿಗೆ 1,778 ಕೋಟಿ ರೂ. ತೆರಿಗೆ ಆದಾಯ ಹೆಚ್ಚಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಇನ್ನೂ ಪರಿಣಾಮಕಾರಿಯಾಗಿ ಜಾರಿಯಾದರೆ 2 ಸಾವಿರ ಕೋಟಿ ರೂ.ವರೆಗೆ ತಲುಪಬಹುದು. ಇದರಿಂದ ಗ್ರಾಮ ಪಂಚಾಯಿತಿಗಳು ಸ್ವಾವಲಂಬಿ ಆಗಲಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಯಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಪಂಚಾಯಿತಿ ವ್ಯಾಪ್ತಿಯ ಆಸ್ತಿ ದಾಖಲೆಗಳಿಗೆ 11ಬಿ ಖಾತೆಗಳನ್ನು ನೀಡಲಾಗುತ್ತಿದೆ. ಅರ್ಜಿ ಹಾಕಿ 15 ದಿನದ ಒಳಗೆ ಖಾತೆ ನೀಡಲು ಸರ್ಕಾರ ತೀರ್ಮಾನಿಸಿದೆ. ಯಾರೂ ಕಚೇರಿಗೆ ಅಲೆಯುವುದು ಬೇಡ, ಆನ್​ಲೈನ್ ಮತ್ತು ಬಾಪೂಜಿ ಕೇಂದ್ರಗಳಲ್ಲಿ ವಿತರಣೆಗೆ ಅವಕಾಶ ನೀಡಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್ ಹೇಳಿದ್ದಾರೆ.

ಗ್ರಾಮ ಪಂಚಾಯಿತಿಗಳ ಉತ್ತಮ ಆಡಳಿತದಿಂದ ಮಾತ್ರವೇ ಗ್ರಾಮೀಣ ಭಾಗದ ಚಿತ್ರಣ ಬದಲಿಸಲು ಸಾಧ್ಯ. ಆದರೆ, ರಾಜ್ಯದಲ್ಲಿ ಆರು ಸಾವಿರಕ್ಕೂ ಅಧಿಕ ಗ್ರಾಪಂಗಳ ಪೈಕಿ ಶೇಕಡ 95 ಗ್ರಾಪಂಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ. ಅಲ್ಲದೆ, ಇವು ಸ್ಥಳೀಯವಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿ ಬದಲಾಗಬೇಕು. ಗ್ರಾಮಗಳ ಸರ್ವಾಂಗೀಣ ವಿಕಾಸ ಸಾಧ್ಯವಾಗಬೇಕಾದರೆ ಮೂಲಸೌಕರ್ಯ ಹೆಚ್ಚಬೇಕು, ಅವಲಂಬನೆ ತಪ್ಪಿ ಸ್ವಾವಲಂಬನೆಯ ಮಂತ್ರ ಮೊಳಗಬೇಕು. ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಹಳ್ಳಿಗಳ ಪ್ರಗತಿ ಚುನಾಯಿತ ಪ್ರತಿನಿಧಿಗಳು ಮತ್ತು ಜನರ ಸಕ್ರಿಯ ಸಹಭಾಗಿತ್ವದಿಂದ ಮಾತ್ರ ಸಾಧ್ಯ ಎಂಬುದನ್ನು ಮರೆಯುವಂತಿಲ್ಲ.

ಉತ್ತಮವಾಗಿ ಕಾರ್ಯನಿರ್ವಹಿಸಿರುವ ಇತರ ಗ್ರಾಪಂಗಳ ಅಭಿವೃದ್ಧಿ ಮಾದರಿಯನ್ನು ಅಭ್ಯಸಿಸಬೇಕು. ಈ ನಿಟ್ಟಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ 238 ಗ್ರಾಪಂಗಳ ಕಾರ್ಯಗಳು, ಅನುಷ್ಠಾನ ಮಾದರಿ, ಯಶಸ್ಸಿನ ಅನುಪಾತ ಇದೆಲ್ಲವನ್ನೂ ಇತರ ಗ್ರಾಪಂಗಳು ಅಧ್ಯಯನ ಮಾಡಿ, ಉತ್ತಮ ಸಂಗತಿಗಳನ್ನು ಅಳವಡಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಂತೆ ಕಾರ್ಯನಿರ್ವಹಿಸಿ ಅಭಿವೃದ್ಧಿ ಪ್ರಕ್ರಿಯೆಗೆ ಶಕ್ತಿ ತುಂಬಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net